ತೆಲಂಗಾಣ ಜನತೆಗೆ ಕಾಂಗ್ರೆಸ್ ನ ‘ಅಭಯಹಸ್ತಂ’: ಆರು ಗ್ಯಾರಂಟಿ ಘೋಷಿಸಿದ ಖರ್ಗೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತೆಲಂಗಾಣ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿದ್ದು, ಇಂದು ಕಾಂಗ್ರೆಸ್​ ಪಕ್ಷ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ.

ಪ್ರಮುಖ ಆರು ಗ್ಯಾರಂಟಿಗಳನ್ನು ಪ್ರಕಟಿಸಿರುವ ಕಾಂಗ್ರೆಸ್​, ರೈತರ ಬೆಳೆ ಸಾಲ ಮನ್ನಾ, ಕೃಷಿ ಬಳಕೆಗೆ 24 ಗಂಟೆ ಉಚಿತ ವಿದ್ಯುತ್, ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಹೆಸರಲ್ಲಿ ಬಡ ಯುವತಿಯರ ಮದುವೆಗೆ ಒಂದು ಲಕ್ಷ ರೂ. ಆರ್ಥಿಕ ನೆರವು ಹಾಗೂ 10 ಗ್ರಾಂ ಚಿನ್ನ ನೀಡುವುದು ಸೇರಿದಂತೆ ಹಲವಾರು ಭರವಸೆಗಳನ್ನು ನೀಡಿದೆ.

ಕಾಂಗ್ರೆಸ್​ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಕ್ಷದ ಪ್ರಣಾಳಿಕೆ ಬಿಡುಗಡೆಗೊಳಿಸಿ, ತೆಲಂಗಾಣ ರಾಜ್ಯಕ್ಕಾಗಿ ಎಷ್ಟೋ ಜನ ಪ್ರಾಣ ಕಳೆದುಕೊಂಡರು ಹಾಗೂ ಹೋರಾಟ ಮಾಡಿದರು. ಆದರೆ, ಪ್ರತ್ಯೇಕ ತೆಲಂಗಾಣದ ಲಾಭವನ್ನು ಬಿಆರ್​ಎಸ್​ ನಾಯಕ, ಸಿಎಂ ಕೆ.ಚಂದ್ರಶೇಖರ್​ ರಾವ್​ ಮಾತ್ರ ಅನುಭವಿಸುತ್ತಿದ್ದಾರೆ ಎಂದರು.

ತೆಲಂಗಾಣದ ಜನತೆಗೆ ಕಾಂಗ್ರೆಸ್​ ಆರು ಗ್ಯಾರಂಟಿಗಳ ಜೊತೆಗೆ ‘ಅಭಯಹಸ್ತಂ’ ಹೆಸರಿನಲ್ಲಿ ಪ್ರಣಾಳಿಕೆ ಪ್ರಕಟಿಸಿದೆ. ಅಧಿಕಾರಕ್ಕೆ ಬಂದ ತಕ್ಷಣವೇ ಪ್ರಣಾಳಿಕೆಯನ್ನು ಸಂಪೂರ್ಣವಾಗಿ ಜಾರಿಗೆ ತರುತ್ತೇನೆ ಎಂದು ಹೇಳಿದರು.

ಕಾಂಗ್ರೆಸ್​ ಪ್ರಣಾಳಿಕೆಯಲ್ಲಿ ಏನಿದೆ?
ಕಾಂಗ್ರೆಸ್​ ತನ್ನ ಪ್ರಣಾಳಿಕೆಯಲ್ಲಿ ಬಡ ಕುಟುಂಬಗಳಲ್ಲಿ ನವಜಾತ ಹೆಣ್ಣು ಮಕ್ಕಳಿಗೆ ‘ಬಂಗಾರು ತಲ್ಲಿ’ ಯೋಜನೆಯ ಮೂಲಕ ಹಣಕಾಸಿನ ನೆರವು, ಬಡ ಕುಟುಂಬದ ಯುವತಿಯರ ಮದುವೆಗೆ 1 ಲಕ್ಷ ರೂ. ಆರ್ಥಿಕ ನೆರವು ಹಾಗೂ ‘ಇಂದಿರಮ್ಮ’ ಉಡುಗೊರೆಯಾಗಿ 10 ಗ್ರಾಂ ಚಿನ್ನ, ತೆಲಂಗಾಣ ಚಳವಳಿಯ ಹುತಾತ್ಮರ ಕುಟುಂಬಗಳಿಗೆ 25 ಸಾವಿರ ರೂ. ಮಾಸಿಕ ಪಿಂಚಣಿ ಹಾಗೂ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡುವ ಆಶ್ವಾಸನೆ ಕೊಟ್ಟಿದೆ.

ಅಲ್ಲದೇ, ಅಧಿಕಾರ ವಹಿಸಿಕೊಂಡ ಆರು ತಿಂಗಳೊಳಗೆ ಶಿಕ್ಷಕರ ಹುದ್ದೆಗಳನ್ನು ಭರ್ತಿ, 2 ಲಕ್ಷ ಬೆಳೆ ಸಾಲ ಮನ್ನಾ ಮತ್ತು ವಾರ್ಷಿಕ 3 ಲಕ್ಷದವರೆಗಿನ ಬಡ್ಡಿ ರಹಿತ ಬೆಳೆ ಸಾಲ, ರಾಜ್ಯ ಬಜೆಟ್‌ನ ಶೇ.15ರಷ್ಟು ಮೀಸಲಿಡುವುದರೊಂದಿಗೆ ಶಿಕ್ಷಣಕ್ಕೆ ಒತ್ತು ಮತ್ತು ವಿದ್ಯಾರ್ಥಿಗಳಿಗೆ ಉಚಿತ ಇಂಟರ್​ನೆಟ್‌, ಪ್ರತಿ ಆಟೋ ಚಾಲಕರ ಖಾತೆಗೆ ವರ್ಷಕ್ಕೆ 12,000 ರೂ. ಜಮೆ ಮಾಡುವ ಭರವಸೆಯನ್ನು ಕಾಂಗ್ರೆಸ್​ ನೀಡಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!