April 15, 2026
Wednesday, April 15, 2026
spot_img

ಕಾಂಗ್ರೆಸ್‌ನದ್ದು ಸಾಧನೆಯಲ್ಲ, ಶೂನ್ಯ ಸಂಪಾದನೆಯ ಸಮಾವೇಶ: ಬೊಮ್ಮಾಯಿ ವಾಗ್ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಾವೇರಿಯಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಸರ್ಕಾರದ 1,000 ದಿನಗಳ ಸಂಭ್ರಮಾಚರಣೆಯ ಸಮಾವೇಶವನ್ನು “ಶೂನ್ಯ ಸಾಧನೆಯ ಸಮಾವೇಶ” ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದ್ದಾರೆ.

ಸಮಾವೇಶಕ್ಕೆ ಜನರು ಸ್ವಯಂಪ್ರೇರಿತವಾಗಿ ಬರುವುದಿಲ್ಲ ಎಂಬ ಭಯದಿಂದ, ಸರ್ಕಾರಿ ಜಮೀನಿನಲ್ಲಿ ವಾಸವಿರುವ ಬಡವರಿಗೆ ಹಕ್ಕುಪತ್ರ ವಿತರಿಸುವ ಕಾರ್ಯಕ್ರಮವನ್ನು ಸಮಾವೇಶದ ಜೊತೆ ಸೇರಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಬಿಜೆಪಿ ಅವಧಿಯಲ್ಲಿ ಅಕ್ರಮ-ಸಕ್ರಮ ಯೋಜನೆಯಡಿ ಅನುಕೂಲ ಮಾಡಿಕೊಡಲಾಗಿತ್ತು. ಆದರೆ ಈಗಿನ ಸರ್ಕಾರ ಖಜಾನೆ ತುಂಬಿಸಿಕೊಳ್ಳಲು ಸಬ್ ರಿಜಿಸ್ಟ್ರಾರ್ ಕಚೇರಿಗಳ ಮೂಲಕ ಬಡವರ ಮೇಲೆ 3 ರಿಂದ 4 ಲಕ್ಷ ರೂ.ಗಳವರೆಗೆ ನೋಂದಣಿ ಶುಲ್ಕ ವಿಧಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

ಹಕ್ಕುಪತ್ರ ನೀಡುವ ನೆಪದಲ್ಲಿ ಕಂದಾಯ ಇಲಾಖೆಯಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಯುತ್ತಿದೆ. ಇದು ಸಾಧನೆಯ ಸಮಾವೇಶವಲ್ಲ, ಬದಲಾಗಿ ‘ಭ್ರಷ್ಟಾಚಾರದ ಸಮಾವೇಶ’ ಎಂದು ಅವರು ಕರೆದಿದ್ದಾರೆ.

ಪ್ರಧಾನಮಂತ್ರಿ ಆವಾಸ ಯೋಜನೆಯಡಿ ರಾಜ್ಯದಲ್ಲಿ ಮನೆ ನಿರ್ಮಾಣ ಪ್ರಕ್ರಿಯೆ ಸಂಪೂರ್ಣ ಸ್ಥಗಿತಗೊಂಡಿದೆ. ಸಾವಿರ ದಿನಗಳ ಈ ವ್ಯರ್ಥ ಆಡಳಿತಕ್ಕೆ ಬಡವರು ಶಾಪ ಹಾಕುತ್ತಿದ್ದಾರೆ ಎಂದು ಬೊಮ್ಮಾಯಿ ಟೀಕಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !