ಹೊಸದಿಗಂತ ವರದಿ ಹುಬ್ಬಳ್ಳಿ:
ರಾಮ ಮಂದಿರದಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆ ಜ.22 ರಂದು ಕರ್ನಾಟಕ ರಾಜ್ಯ ಸೋಮವಂಶೀಯ ಸಹಸ್ರಾರ್ಜುನ ಕ್ಷತ್ರಿಯ ಸಮಾಜದ ವತಿಯಿಂದ ಪಂಚ ಟ್ರಸ್ಟ್ ಕಮಿಟಿಗಳಲ್ಲಿ ಬರುವ ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಘಟಕದ ಅಧ್ಯಕ್ಷ, ಮಾಜಿ ಶಾಸಕ ಅಶೋಕ ಕಾಟವೆ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಎಸ್‌ಎಸ್‌ಕೆ ಸಮಾಜದ ಎಲ್ಲಾ ಪಂಚ ಟ್ರಸ್ಟ್ ಕಮಿಟಿಗಳಿಲ್ಲಿ ಬರುವ ಎಲ್ಲಾ ದೇವಸ್ಥಾನಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ, ಪೂಜಾ ಸಮಾರಂಭ, ಭವ್ಯ ದೀಪೋತ್ಸವ ಹಾಗೂ ಪ್ರಸಾದ ವಿತರಣೆ ಮಾಡಲಾಗುವುದು ಎಂದರು.
ಜಿಲ್ಲೆಯಲ್ಲಿ 22 ಟ್ರಸ್ಟ್ ಕಮಿಟಿಗಳಿಂದ 100 ದೇವಸ್ಥಾನಗಳಿದ್ದು, ಇಲ್ಲೆಲ್ಲ ವಿಶೇಷ ಪೂಜೆ ನಡೆಯಲಿದೆ. ನಗರದ ದುರ್ಗಾದೇವಿ, ತುಳಜಾಭವಾನಿ, ಆಂಜನೇಯ, ವಿಠ್ಠಲ ಮಂದಿರದಲ್ಲಿ ಪೂಜೆ ನಡೆಯಲಿದ್ದು, ಅಲ್ಲಲ್ಲಿ ಭಜನೆ ನಡೆಯಲಿವೆ ಎಂದರು.
ವಿಠ್ಠಲಸಾ ಲದವಾ ಅವರು ಮಾತನಾಡಿ, ಜ. 22ರಂದು ದಾಜಿಬಾನಾಪೇಟೆ ವೃತ್ತದಲ್ಲಿ ಶ್ರೀರಾಮನ ಭವ್ಯ ಭಾವಚಿತ್ರಕ್ಕೆ ಪೂಜೆ ನಡೆಯಲಿದೆ ಎಂದರು. ಮುಖಂಡ ಭಾಸ್ಕರ್ ಜಿತೂರಿ ಮಾತನಾಡಿ, ಜ.22 ರಂದು ಬೆಳಗ್ಗೆ 7 ರಿಂದ ಕಮರಿಪೇಟೆಯಲ್ಲಿರುವ ಸುಮಾರು 151 ವರ್ಷದ ಹಳೆಯದಾದ ರಾಮ ಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆ, ಅಭಿಷೇಕ ನಡೆಯಲಿದೆ. ಕಮರಿಪೇಟೆಯಲ್ಲಿ ಹಬ್ಬದ ವಾತಾವರಣ ನಡೆಯಲಿದೆ ಎಂದರು.
ರಾಜು ಜರತಾರಘರ್ ಮಾತನಾಡಿ ಅಂದು ಶಿವಶಕ್ತಿ ಯುವ ಸಂಘದಿಂದ ದಿವಟೆ ಓಣಿಯಲ್ಲಿ ರಂಗೋಲಿ ಸ್ಪರ್ಧೆ, ರಾಮನ ವೇಷಭೂಷಣ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದರು.
ಇದರ ಜೊತೆಯಲ್ಲಿ ವಿಎಕೆ ಫೌಂಡೇಶನ್ ವತಿಯಿಂದ ಜ.19ರಂದು ಗೋಪನಕೊಪ್ಪದ ವೃತ್ತದಲ್ಲಿ ಬೆಳಗ್ಗೆ 12 ಗಂಟೆಗೆ ಕರಸೇವಕರಿಗೆ ಸನ್ಮಾನ ಮಾಡಲಾಗುವುದು ಎಂದು ಅಶೋಕ ಕಾಟವೆ ತಿಳಿಸಿದರು.
ಮಾಜಿ ಧರ್ಮದರ್ಶಿ ನೀಲಕಂಠಸಾ ಜಡಿ, ಮಾಜಿ ಮಹಾಪೌರ ಡಿ.ಕೆ. ಚವ್ಹಾಣ, ವೆಂಕಟೇಶ ಕಾಟವೆ, ಗೋಪಾಲ ಬದ್ದಿ, ದೀಪಕ್ ಇತರರು ಇದ್ದರು.