Sunday, February 5, 2023

Latest Posts

ಭಯಾನಕ ಘಟನೆ: ಬಿಹಾರದಲ್ಲಿ 35 ಸಿಲಿಂಡರ್‌ಗಳ ಸರಣಿ ಸ್ಫೋಟ, ಭಯದಿಂದ ತತ್ತರಿಸಿದ ಸ್ಥಳೀಯರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಿಹಾರದ ಭಾಗಲ್ಪುರ್ ಪ್ರದೇಶ ಸಿಲಿಂಡರ್ ಸ್ಫೋಟದಿಂದ ತತ್ತರಿಸಿದೆ. ಮಂಗಳವಾರ ಮಧ್ಯರಾತ್ರಿ ಬಳಿಕ ಭಾರೀ ಶಬ್ದದೊಂದಿಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಸ್ಥಳೀಯರು ಭಯಭೀತರಾಗಿದ್ದರು. ಸಿಲಿಂಡರ್‌ ಲೋಡ್‌ನೊಂದಿಗೆ ತೆರಳುತ್ತಿದ್ದ ಟ್ರಕ್‌ನಲ್ಲಿ ಇದ್ದಕ್ಕಿದ್ದ ಹಾಗೆ ಒಂದಾದಮೇಲೋಮದರಂತೆ ಸಿಲಿಂಡರ್‌ ಸ್ಫೋಟಗೊಂಡ ಘಟನೆ ನಾರಾಯಣಪುರದ ಭವಾನಿಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಗಿನ ಜಾವ 2.30ರಿಂದ 3ರ ಸುಮಾರಿಗೆ ಸಂಭವಿಸಿದೆ.

ರಾತ್ರಿ ಎಲ್ಲರೂ ಮಲಗಿದ್ದಾಗ ಸ್ಫೋಟ ಸಂಭವಿಸಿದ್ದು, ಭಾರೀ ಶಬ್ಧಕ್ಕೆ ಜನರು ಭಯಭೀತರಾಗಿದ್ದರು. ಏನಾಗುತ್ತಿದೆ ಎಂದು ನೋಡಲು ಹೊರಬಂದ ಜನರಿಗೆ ದೂರದಲ್ಲಿ ದೊಡ್ಡ ಬೆಂಕಿ ಕಾಣಿಸಿಕೊಂಡಿತು. ವಿಡಿಯೋ ತೆಗೆದು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಸ್ಫೋಟ ನಡೆದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಪೆಟ್ರೋಲ್ ಬಂಕ್ ಇತ್ತು. ಬೆಂಕಿ ಹರಡದ ಕಾರಣ ಸ್ಥಳೀಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಎನ್‌ಎಚ್-31ರಲ್ಲಿ ಈ ಘಟನೆ ನಡೆದ ಬಳಿಕ ರಸ್ತೆಯ ಎರಡೂ ಬದಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಟ್ರಕ್‌ನಲ್ಲಿ ಸುಮಾರು 30 ರಿಂದ 35 ಸಿಲಿಂಡರ್‌ಗಳಿವೆ ಎನ್ನಲಾಗಿದೆ. ಅಪಘಾತದಲ್ಲಿ ಲಾರಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಪೊಲೀಸರು ಸ್ಥಳಕ್ಕಾಗಮಿಸಿ ಸಂಚಾರ ನಿಯಂತ್ರಿಸಿದರು. ನಾಲ್ಕು ಅಗ್ನಿಶಾಮಕ ವಾಹನಗಳ ಸಹಾಯದಿಂದ ಬೆಂಕಿಯನ್ನು ಹತೋಟಿಗೆ ತರಲಾಯಿತು. ಲಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಸಿಲಿಂಡರ್‌ಗಳು ಒಂದೊಂದಾಗಿ ಸ್ಫೋಟಗೊಂಡಿವೆ ಎಂದು ಪೊಲೀಸರು ಮಾಹಿತಿ ನೀಡಿದರು. ಭಾರೀ ಸ್ಫೋಟದಿಂದಾಗಿ ಸಮೀಪದ ರೈತರು ಪ್ರಾಣ ಉಳಿಸಿಕೊಳ್ಳಲು ದನಕರುಗಳೊಂದಿಗೆ ಕೊಟ್ಟಿಗೆಯಿಂದ ಬಿಡಿಸಿ ಓಡಿ ಬಂದರು. ಮೊದಲಿಗೆ ಬಾಂಬ್ ಸ್ಫೋಟ ಸಂಭವಿಸಿದೆ ಎಂದು ಭಾವಿಸಲಾಗಿತ್ತು, ಸ್ವಲ್ಪ ಸಮಯದ ನಂತರ ಗ್ಯಾಸ್ ಸಿಲಿಂಡರ್‌ಗಳು ಸ್ಫೋಟಗೊಂಡಿರುವುದು ಕಂಡುಬಂದಿದೆ. ಸ್ಫೋಟದ ನಂತರ ಬುಧವಾರ ನಸುಕಿನ ಜಾಮುನಾ ರಸ್ತೆಯಲ್ಲಿ ಹಲವಾರು ಸಿಲಿಂಡರ್‌ಗಳು ಚೆಲ್ಲಾಪಿಲ್ಲಿಯಾಗಿದ್ದವು. ಟ್ರಕ್ ಚಾಲಕನನ್ನು ಮುಂಗೇರ್‌ನ ಶಂಕರಪುರ ಗ್ರಾಮದ ಮಂಟು ಯಾದವ್ ಎಂದು ಗುರುತಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!