ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಪ್ರಾಪ್ತ ಪತ್ನಿಯೊಂದಿಗೆ ಸಮ್ಮತಿಯ ಲೈಂಗಿಕ ಕ್ರಿಯೆ ನಡೆಸುವುದು ಅತ್ಯಾಚಾರ ಸಮ ಎಂದು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠವು ತೀರ್ಪು ನೀಡಿದೆ.
ನ್ಯಾಯಮೂರ್ತಿ ಗೋವಿಂದ ಸನಾಪ್ ಅವರ ಏಕಸದಸ್ಯ ಪೀಠವು, ಅಪ್ರಾಪ್ತ ಪತ್ನಿಯೊಂದಿಗೆ ಸಮ್ಮತಿಯಿಂದ ಲೈಂಗಿಕ ಕ್ರಿಯೆ ನಡೆಸುವುದು ಅಪರಾಧ ಎಂದು ಪರಿಗಣಿಸಲಾಗುವುದು. ಹಾಗಾಗಿ ಇದಕ್ಕೆ ಒಪ್ಪಿಗೆ ಸೂಚಿಸಿದಲ್ಲಿ ಆ ಅಪರಾಧಕ್ಕೆ ಕಾನೂನು ರಕ್ಷಣೆಯನ್ನು ನೀಡಿದಂತಾಗುತ್ತದೆ ಎಂದಿದೆ.
ಪತ್ನಿಯ ವಯಸ್ಸು 18 ಮೀರಿರಬೇಕು, ಅದಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯ ಜೊತೆ ಲೈಂಗಿಕ ಸಂಪರ್ಕ ಹೊಂದಿದರೆ ಅದನ್ನು ಅತ್ಯಾಚಾರ ಎಂದು ಪರಿಗಣಿಸಿ, ಪ್ರಕರಣ ದಾಖಲಿಸಬಹುದು ಎಂದು ಅಭಿಪ್ರಾಯಪಟ್ಟಿದೆ.
ವಾರ್ಧಾ ಜಿಲ್ಲಾ ನ್ಯಾಯಾಲಯವು ಅಪ್ರಾಪ್ತೆಯ ದೂರಿನ ಆಧಾರದ ಮೇಲೆ ಓರ್ವ ಆರೋಪಿಯನ್ನು ಪೋಕ್ಸೋ ಕಾಯ್ದೆಯಡಿಯಲ್ಲಿ ಬಂಧಿಸಿತ್ತು. ಆರೋಪಿ ಈ ಆದೇಶವನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ. ಈ ವಿಚಾರಣೆಯ ಸಂದರ್ಭದಲ್ಲಿ ಬಾಂಬೆ ಹೈಕೋರ್ಟ್ ತೀರ್ಪನ್ನು ನೀಡಿದೆ.
ಏನಿದು ಪ್ರಕರಣ?
ಆರೋಪಿಯು ದೂರುದಾರೆಯನ್ನು ಪ್ರೀತಿಸುತ್ತಿದ್ದ. ಮದುವೆಯಾಗುವುದಾಗಿ ನಂಬಿಸಿ ಆಕೆಯ ಜೊತೆಗೆ ಲೈಂಗಿಕ ಕ್ರಿಯೆ ನಡೆಸಿದ್ದ. ಬಳಿಕ ಆಕೆ ತಾನು ಗರ್ಭಿಣಿಯಾಗಿರುವುದಾಗಿ ತಿಳಿದು ಆರೋಪಿಯನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಳು. ಒತ್ತಾಯದ ಮೇರೆಗೆ ಹಾರ ಬದಲಾಯಿಸುವ ಮೂಲಕ ಮದುವೆಯಾದಂತೆ ನಂಬಿಸಿದ್ದ. ನಂತರ ಆಕೆಗೆ ಗರ್ಭಪಾತ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದ. ಇದಕ್ಕೆ ಒಪ್ಪದಿದ್ದಾಗ ಆಕೆಯ ಮೇಲೆ ಹಲ್ಲೆ ನಡೆಸಿದ್ದು, ಆತನ ಹಿಂಸೆ ಸಹಿಸಲಾಗದೇ ಆಕೆ ತವರು ಮನೆಗೆ ತೆರಳಿದ್ದಳು. ಬಳಿಕ ಅಲ್ಲಿಗೆ ತೆರಳಿ ಅಲ್ಲಿಯೂ ಕೂಡ ಹಲ್ಲೆ ನಡೆಸಿದ್ದಾನೆ. ಈ ವೇಳೆ ಆರೋಪಿ ಮದುವೆಯ ನಾಟಕವಾಡಿ, ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಜೊತೆಗೆ ಆಕೆಯ ಹೊಟ್ಟೆಯಲ್ಲಿರುವ ಮಗು ತನ್ನದಲ್ಲ ಎಂದು ಕೂಡ ವಾದಿಸಿದ್ದಾನೆ. ಇದರಿಂದ ತನ್ನ ಗಂಡನ ನಿಂದನೆಯನ್ನು ಸಹಿಸಲಾಗದೇ ಆಕೆ 2019ರ ಮೇನಲ್ಲಿ ವಾರ್ಧಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.
ವಿಚಾರಣೆಯ ವೇಳೆ ಹಾರ ಬದಲಾಯಿಸಿರುವ ಫೋಟೋಗಳು, ಜೊತೆಗೆ ಆಕೆ ನನ್ನ ಪತ್ನಿಯಾಗಿದ್ದು, ನಾನು ಆಕೆಯ ಒಪ್ಪಿಗೆಯಿಂದ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದೆ ಎಂದು ಹೇಳಿಕೊಂಡಿದ್ದನು. ಆದರೆ ಅಪರಾಧ ನಡೆದ ದಿನಾಂಕದಂದು ಸಂತ್ರಸ್ತೆಯ ವಯಸ್ಸು 18ಕ್ಕಿಂತ ಕಡಿಮೆ ಇತ್ತು ಎನ್ನುವುದು ತನಿಖೆಯ ವೇಳೆ ದೃಢಪಟ್ಟಿತ್ತು. ಸಂತ್ರಸ್ತೆಗೆ ಜನಿಸಿದ ಗಂಡು ಮಗುವಿನ ತಂದೆ ಆರೋಪಿ ಎನ್ನುವುದು ಡಿಎನ್‌ಎ ಪರೀಕ್ಷೆಯಲ್ಲಿ ಸಾಬೀತಾಗಿತ್ತು.