ನಮ್ಮನ್ನೂ ಶಿಕ್ಷಕಿಯರೆಂದು ಪರಿಗಣಿಸಿ: ಅಂಗನವಾಡಿ ಕಾರ್ಯಕರ್ತೆಯರ ಒತ್ತಾಯ

ಹೊಸದಿಗಂತ ವರದಿ ಮಡಿಕೇರಿ:

ಅಂಗನವಾಡಿ ಕಾರ್ಯಕರ್ತೆಯರನ್ನು ಶಿಕ್ಷಕಿಯರನ್ನಾಗಿ ಪರಿಗಣಿಸುವಂತೆ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಹಾಗೂ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಸಮಿತಿ(ಸಿಐಟಿಯು) ಕೊಡಗು ಜಿಲ್ಲಾ ಸಮಿತಿ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು. ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಸಿಐಟಿಯು ಪ್ರಮುಖರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಬೇಡಿಕೆಯ ಈಡೇರಿಕೆಗಾಗಿ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.

ಸಿಐಟಿಯು ಕೊಡಗು ಜಿಲ್ಲಾಧ್ಯಕ್ಷ ಪಿ.ಎಂ.ಭರತ್ ಮಾತನಾಡಿ, ಅಂಗನವಾಡಿ ನೌಕರರು ಗ್ರಾಚ್ಯುಟಿ ಪಡೆಯಲು ಅರ್ಹರು ಎಂಬ ಐತಿಹಾಸಿಕ ತೀರ್ಪನ್ನು ನ್ಯಾಯಾಲಯ ನೀಡಿದೆ. ಇದರ ಪ್ರಕಾರ ರಾಜ್ಯದಾದ್ಯಂತ ಸಾವಿರಾರು ನಿವೃತ್ತಿ ನೌಕರರು ಸಿಡಿಪಿಒ, ಡಿಡಿ, ನಿರ್ದೇಶಕರು ಮತ್ತು ಪ್ರಧಾನ ಕಾರ್ಯದರ್ಶಿಗಳಿಗೆ ಅರ್ಜಿಯನ್ನು ಸ್ವತಃ ಹಾಗೂ ಅಂಚೆ ಮುಖಾಂತರ ಸಲ್ಲಿಸಿದ್ದಾರೆ. ಆದರೆ ಕೆಲವೆಡೆ ಸಿಡಿಪಿಒ, ಡಿಡಿ, ನಿರ್ದೇಶಕರು ಮತ್ತು ಪ್ರಧಾನ ಕಾರ್ಯದರ್ಶಿಗಳು ಅರ್ಜಿಗಳನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ. ಅಲ್ಲದೆ ಹಲವಾರು ನೌಕರರಿಗೆ ನೇಮಕಾತಿ ಮತ್ತು ನಿವೃತ್ತಿಯ ಆದೇಶವನ್ನು ನೀಡಿಲ್ಲ. ಈ ಸಂದರ್ಭ ಕೇಳಲು ಹೋದರೆ ನಿರಾಕರಿಸಿರುವ ಘಟನೆಗಳು ನಡೆದಿವೆ ಎಂದು ಆರೋಪಿಸಿದರು.

ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರನ್ನು ಚುನಾವಣೆ, ಸಾರ್ವಜನಿಕ ಹಬ್ಬಗಳು, ಕುಂಬ ಕಲಶಗಳನ್ನು ಹೊರಿಸುವ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದು ಹೆಚ್ಚಾಗುತ್ತಿದ್ದು, ಇದನ್ನು ತಕ್ಷಣ ನಿಲ್ಲಿಸಬೇಕು, ಹಳೇ ಮೊಬೈಲನ್ನು ತೆಗೆದುಕೊಂಡು ಹೊಸ ಮೊಬೈಲನ್ನು ಸರ್ಕಾರ ಕೊಡುವ ತನಕ ಪುಸ್ತಕದಲ್ಲಿ ಬರೆಯುವುದನ್ನು ಮುಂದುವರೆಸಬೇಕು. ಮಕ್ಕಳನ್ನು ಆಕರ್ಷಿಸಲು ಅಂಗನವಾಡಿ ಕೇಂದ್ರಗಳಿಗೆ ನೀಡುತ್ತಿರುವ 12 ಲಕ್ಷ ಅನುದಾನವನ್ನು 20 ಲಕ್ಷಕ್ಕೇರಿಸಿ ಅಂಗನವಾಡಿ ಕಟ್ಟಡಗಳನ್ನು ವ್ಯವಸ್ಥಿತಗೊಳಿಸಬೇಕು. ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ, ಶೂ, ಪುಸ್ತಕಗಳು ಮತ್ತು ಬ್ಯಾಗ್‍ಅನ್ನು ಉಚಿತವಾಗಿ ಒದಗಿಸಬೇಕು. ಗ್ರಾಚ್ಯುಟಿ ಪಾವತಿಸಲು ತಕ್ಷಣ ಸರ್ಕಾರ ನಿರ್ದೇಶನ ನೀಡಬೇಕು ಗ್ರಾಚ್ಯುಟಿಗೆ ಸಲ್ಲಿಸಿರುವ ಅರ್ಜಿದಾರರಿಗೆ ಕೂಡಲೇ ಪರಿಹಾರ ನೀಡಲು “ರಾಜ್ಯ ಸಚಿವ ಸಂಪುಟ” ಆದೇಶಿಸಬೇಕು. ಅನ್ನದೊಟ್ಟಿಗೆ ಅಕ್ಷರ ಕೇಂದ್ರವಾಗಿ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಿ, ಬಲಿಷ್ಠ ಪಡಿಸಬೇಕು. ಅಂಗನವಾಡಿ ಕೇಂದ್ರದ ವೇಳಾಪಟ್ಟಿ ಬದಲಾಗಬೇಕು, ಉಚಿತ ಕೆಲಸ ನಿಲ್ಲಿಸಿ ಸಮಯಕ್ಕೆ ಸರಿಯಾಗಿ ವೇತನ ಪಾವತಿಸಬೇಕೆಂದು ಆಗ್ರಹಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!