ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್‌ನ ಗ್ಯಾರೆಂಟಿ ಯೋಜನೆಗಳು ಜನರಿಗೆ ತಲುಪಲು ಬಿಡದಂತೆ ಕೇಂದ್ರ ಸರ್ಕಾರವು ಷಡ್ಯಂತ್ರ ನಡೆಸುತ್ತಿರುವುದು ನಾಚಿಗೇಡಿನ ಸಂಗತಿ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಹಸಿವು ಮುಕ್ತ ರಾಜ್ಯ ನಿರ್ಮಿಸಲು ಕಾಂಗ್ರೆಸ್ ಸರ್ಕಾರ ಜನರಿಗೆ 10 ಕೆಜಿ ಅಕ್ಕಿ ನೀಡಲು ಪಣ ತೊಟ್ಟಿದೆ. ಈ ನಿಟ್ಟಿನಲ್ಲಿ ಅಗತ್ಯವಿದ್ದ ಹೆಚ್ಚುವರಿ ಅಕ್ಕಿಯನ್ನು ಎಫ್‌ಸಿಐನಿಂದ ಖರೀದಿಗೆ ನಾವು ಮುಂದಾಗಿದ್ದೇವೆ. ಆದರೆ, ಕೇಂದ್ರ ಸರ್ಕಾರ ರಾಜ್ಯಗಳಿಗೆ ಅಕ್ಕಿ ಮಾರಾಟ ಮಾಡದಂತೆ ಆದೇಶಿಸಿದೆ. ಇದು ಬಿಜೆಪಿಯ ದುಷ್ಟ ರಾಜಕಾರಣವನ್ನು ಎತ್ತಿ ತೋರಿಸುತ್ತದೆ” ಎಂದು ಕಿಡಿ ಕಾರಿದರು.
“ಕಾಂಗ್ರೆಸ್ ಗ್ಯಾರಂಟಿಗಳು ಜನರಿಗೆ ತಲುಪಲು ಬಿಡದಂತೆ ಕೇಂದ್ರ ಬಿಜೆಪಿ ಸರ್ಕಾರ ಈ ರೀತಿ ಷಡ್ಯಂತ್ರ ನಡೆಸಲು ಮುಂದಾಗಿರುವುದು ನಾಚಿಕೆಗೇಡಿನ ವಿಚಾರ. ಈಗಾಗಲೇ ರಾಜ್ಯದಲ್ಲಿ ಬಿಜೆಪಿ 63 ಮತ್ತೊಂದು ಸೀಟಿಗೆ ತೃಪ್ತಿಪಡಬೇಕಾಗಿದೆ. ಇದೇ ರೀತಿ ದುಷ್ಟ ರಾಜಕಾರಣ ಮುಂದುವರೆಸಿದರೆ, ಮುಂದೆ ಅದು 6 ಮತ್ತು 3 ಆಗಲಿದೆ. ಇದು ಗ್ಯಾರಂಟಿ” ಎಂದು ಲೇವಡಿ ಮಾಡಿದರು.