October 8, 2026
Thursday, October 8, 2026
spot_img

‘ನನ್ನ ವಿರುದ್ಧವೂ ಸ್ಟಿಂಗ್ ಆಪರೇಷನ್‌ಗೆ ಸಂಚು’: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಫೋಟಕ ಹೇಳಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ರಾಜಕೀಯದಲ್ಲಿ ಸ್ಟಿಂಗ್ ಆಪರೇಷನ್‌ಗಳ ಕುರಿತ ಚರ್ಚೆ ತೀವ್ರಗೊಂಡಿರುವ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮ ವಿರುದ್ಧವೂ ಇಂತಹದ್ದೊಂದು ಪ್ರಯತ್ನ ನಡೆದಿತ್ತು ಎಂದು ಹೇಳುವ ಮೂಲಕ ಹೊಸ ಸಂಚಲನ ಮೂಡಿಸಿದ್ದಾರೆ.

ತಮ್ಮನ್ನು ರಾಜಕೀಯವಾಗಿ ಸಿಲುಕಿಸುವ ಉದ್ದೇಶದಿಂದ ಕೆಲವರು ಸಂಪರ್ಕಿಸಲು ಯತ್ನಿಸಿದ್ದರು ಎಂದು ಅವರು ಆರೋಪಿಸಿದ್ದು, ಈ ಬೆಳವಣಿಗೆಗೆ ಸಂಬಂಧಿಸಿದ ದಾಖಲೆಗಳು ಹಾಗೂ ಛಾಯಾಚಿತ್ರಗಳು ತಮ್ಮ ಬಳಿ ಇರುವುದಾಗಿ ತಿಳಿಸಿದ್ದಾರೆ.

ನಡೆ, ಉದ್ದೇಶದ ಬಗ್ಗೆ ಅನುಮಾನ

ಕೆಲವರು ಜಿಎಸ್‌ಟಿ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚಿಸಲು ತಮ್ಮನ್ನು ಭೇಟಿಯಾಗಲು ಬಂದಿದ್ದರು. ಆದರೆ ಅವರ ನಡೆ ಮತ್ತು ಉದ್ದೇಶದ ಬಗ್ಗೆ ಅನುಮಾನ ಮೂಡಿದ ಹಿನ್ನೆಲೆಯಲ್ಲಿ ತಾವು ಎಚ್ಚರಿಕೆಯಿಂದ ವರ್ತಿಸಿದ್ದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಬಳಿಕ ಪೊಲೀಸ್ ಮೂಲಗಳ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು, ಸಂಬಂಧಿಸಿದ ವಿವರಗಳನ್ನು ಪರಿಶೀಲಿಸಿರುವುದಾಗಿ ತಿಳಿಸಿದ್ದಾರೆ.

ಇದರ ಹಿಂದೆ ಯಾರಿದ್ದಾರೆ ಅನ್ನೋದು ಗೊತ್ತಿದೆ

ಈ ಬೆಳವಣಿಗೆಯ ಹಿಂದೆ ಯಾರು ಇದ್ದಾರೆ, ಯಾರಿಂದ ಹಣಕಾಸಿನ ನೆರವು ದೊರೆತಿದೆ ಮತ್ತು ಇಡೀ ಕಾರ್ಯಾಚರಣೆಯ ಹಿಂದಿನ ಪ್ರಮುಖ ವ್ಯಕ್ತಿ ಯಾರು ಎಂಬುದರ ಬಗ್ಗೆಯೂ ತಮಗೆ ಮಾಹಿತಿ ಇದೆ ಎಂದು ಸಿಎಂ ಡಿಕೆಶಿ ಹೇಳಿದ್ದಾರೆ. ಆದರೆ ಸದ್ಯಕ್ಕೆ ಆ ಹೆಸರುಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಗತ್ಯ ಬಂದರೆ ತಮ್ಮ ಬಳಿ ಇರುವ ದಾಖಲೆಗಳು ಹಾಗೂ ಫೋಟೋಗಳನ್ನು ಸಾರ್ವಜನಿಕರ ಮುಂದೆ ಇಡಬಹುದು ಎಂಬ ಸುಳಿವನ್ನೂ ನೀಡಿದ್ದಾರೆ.

ಇದನ್ನೂ ಓದಿ:

ಸುಮಾರು ಎರಡು ದಶಕಗಳ ಹಿಂದೆಯೂ ಇದೇ ರೀತಿಯ ರಾಜಕೀಯ ತಂತ್ರಗಳು ನಡೆದಿದ್ದವು ಎಂದು ಸ್ಮರಿಸಿದ ಅವರು, ಇಂತಹ ಪ್ರಯತ್ನಗಳ ಬಗ್ಗೆ ಸಚಿವರು ಮತ್ತು ಅಧಿಕಾರಿಗಳು ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದ್ದಾರೆ. ರಾಜಕಾರಣಿಗಳನ್ನು ಯಾವುದಾದರೂ ಮಾತುಕತೆ ಅಥವಾ ಭೇಟಿಯ ನೆಪದಲ್ಲಿ ಬಲೆಗೆ ಬೀಳಿಸುವ ಪ್ರಯತ್ನ ನಡೆಯುವ ಸಾಧ್ಯತೆ ಇದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.

ಈ ಸಂಚಿನ ಹಿಂದೆ ರಾಜ್ಯದವರೇ ಅಥವಾ ಹೊರಗಿನವರೇ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಸಮಯ ಬಂದಾಗ ಸತ್ಯ ಹೊರಬರಲಿದೆ ಎಂಬ ನಿಲುವನ್ನು ಅವರು ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿಯ ಈ ಹೇಳಿಕೆ ಇದೀಗ ರಾಜ್ಯ ರಾಜಕೀಯದಲ್ಲಿ ಮತ್ತೊಂದು ಚರ್ಚೆಗೆ ಕಾರಣವಾಗಿದೆ. ಸ್ಟಿಂಗ್ ಆಪರೇಷನ್ ಹೆಸರಿನಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಹಿಂದೆ ನಿಜವಾಗಿಯೂ ಯಾರಿದ್ದಾರೆ ಎಂಬ ಪ್ರಶ್ನೆ ಇದೀಗ ಮತ್ತಷ್ಟು ಕುತೂಹಲ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ದಾಖಲೆಗಳು ಅಥವಾ ಸಾಕ್ಷ್ಯಗಳು ಹೊರಬರುತ್ತವೆಯೇ ಎಂಬುದರತ್ತ ರಾಜಕೀಯ ವಲಯದ ಗಮನ ನೆಟ್ಟಿದೆ.

Must Read