ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಹಾಗೂ ತಮಿಳಗ ವೆಟ್ರಿ ಕಳಗಂ ಪಕ್ಷದ (ಟಿವಿಕೆ) ಮುಖ್ಯಸ್ಥ ದಳಪತಿ ವಿಜಯ್ ಅವರನ್ನು ನೋಡಲು ಬಂದಿದ್ದ ಮಧುರೈನ ಪೊಲೀಸ್ ಕಾನ್ಸ್ಟೇಬಲ್ ಕಥಿರವಣ್ ಮಾರ್ಕ್ಸ್ ಎಂಬುವರು ಟಿವಿಕೆ ರಾಜಕೀಯ ಪಕ್ಷದ ಶಾಲು ಧರಿಸಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಿ ಹಿರಿಯ ಪೊಲೀಸ್ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ದಿಂಡಿಗಲ್ ಜಿಲ್ಲೆಯ ಕೊಡೈಕನಾಲ್ ಪ್ರದೇಶದಲ್ಲಿ ಕಳೆದ ಎರಡ್ಮೂರು ದಿನಗಳಿಂದ ನಡೆಯುತ್ತಿದ್ದ ‘ಜನ ನಾಯಕನ್’ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಲು ಖಾಸಗಿ ವಿಮಾನದ ಮೂಲಕ ವಿಜಯ್ ಮಧುರೈಗೆ ಆಗಮಿಸಿದ್ದರು. ಈ ವೇಳೆ ಅವರನ್ನು ನೋಡಲು ವಿಮಾನ ನಿಲ್ದಾಣದ ಮುಂದೆ ಟಿವಿಕೆ ಸ್ವಯಂಸೇವಕರು ಮತ್ತು ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಭದ್ರತೆಯಲ್ಲಿ ತೊಡಗಿದ್ದ ಪೊಲೀಸ್ ಕಾನ್ಸ್ಟೇಬಲ್ ಕಥಿರವಣ್ ಮಾರ್ಕ್ಸ್, ತನಗೆ ತುರ್ತು ಕೆಲಸವಿದೆ ಎಂದು ಹೇಳಿ ತಮ್ಮ ಮೇಲಾಧಿಕಾರಿಯಿಂದ ಅನುಮತಿ ಕೋರಿ ಅಲ್ಲಿಂದ ನೇರವಾಗಿ ನಟ ವಿಜಯ್ ಅವರನ್ನು ಕಾಣಲು ಬಂದಿದ್ದರು. ಪೊಲೀಸ್ ಸಮವಸ್ತ್ರವಿಲ್ಲದೆ ಮತ್ತು ಹೆಗಲ ಮೇಲೆ ಟಿವಿಕೆ ಪಕ್ಷದ ಧ್ವಜದೊಂದಿಗೆ ವಿಜಯ್ ಅವರನ್ನು ಸ್ವಾಗತಿಸುತ್ತಿರುವ ಕಥಿರವಣ್ ಅವರ ವಿಡಿಯೋಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಗಮನಿಸಿದ ಮಧುರೈ ನಗರ ಪೊಲೀಸ್ ಆಯುಕ್ತ ಲೋಗನಾಥನ್ ಅವರು ತಕ್ಷಣದಿಂದ ಜಾರಿಗೆ ಬರುವಂತೆ ಪೊಲೀಸ್ ಕಾನ್ಸ್ಟೇಬಲ್ ಕಥಿರವಣ್ ಮಾರ್ಕ್ಸ್ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.