ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೌಟುಂಬಿಕ ಕಲಹದಿಂದ ಬೇಸತ್ತ ಇಂಜಿನಿಯರ್ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನದ ಶೆಟ್ಟಿಹಳ್ಳಿ ಗ್ರಾಮದ ಬಳಿಯ ಹೇಮಾವತಿ ನದಿಯಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಹಾಸನದ ಇಂದಿರಾನಗರ ನಿವಾಸಿ ಪ್ರಮೋದ್ (35) ಎಂದು ಗುರುತಿಸಲಾಗಿದೆ. ಪ್ರಮೋದ್ ಹಾಗೂ ಆತನ ಪತ್ನಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಆಕೆಯ ಪೋಷಕರು ಕಿರುಕುಳ ನೀಡುತ್ತಿದ್ದರು, ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಡಿ.29ರಂದು ಸಂಜೆ ಪ್ರಮೋದ್ ಮನೆಯಲ್ಲಿ ಮೊಬೈಲ್ ಮರೆತು ಹೋಗಿದ್ದರು. ಆತನ ಪೋಷಕರು ಪ್ರಮೋದ್‌ಗಾಗಿ ಹುಡುಕಾಟ ನಡೆಸಿದ್ದು, ನಂತರ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದಾರೆ.
ಅಂದು ರಾತ್ರಿ ಹೇಮಾವತಿ ನದಿ ಸೇತುವೆ ಬಳಿ ಪ್ರಮೋದ್ ಅವರ ಬೈಕ್ ಪತ್ತೆಯಾಗಿತ್ತು. ಸ್ಥಳೀಯರು ನೋಡಿ ಪರಿಶೀಲಿಸಿದಾಗ ಬೈಕ್ ನಲ್ಲಿ ಬ್ಯಾಂಕ್ ಪಾಸ್ ಬುಕ್ ಗಳು ಪತ್ತೆಯಾಗಿವೆ. ಪಾಸ್‌ಬುಕ್‌ನಲ್ಲಿ ನೀಡಿದ್ದ ದೂರವಾಣಿ ಸಂಖ್ಯೆಗೆ ಕರೆ ಮಾಡಿದಾಗ ಪ್ರಮೋದ್ ಅವರ ತಂದೆ ಕರೆ ಸ್ವೀಕರಿಸಿದ್ದು ನದಿಯ ಬಳಿ ದ್ವಿಚಕ್ರ ವಾಹನ ನಿಲ್ಲಿಸಿರುವ ಬಗ್ಗೆ ಮಾಹಿತಿ ನೀಡಿದರು.
ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಡಿಸೆಂಬರ್ 30 ರಿಂದ ಹೇಮಾವತಿ ನದಿಯಲ್ಲಿ ಶೋಧ ನಡೆಸುತ್ತಿದ್ದು, ಇಂದು ಬೆಳಗ್ಗೆ ನದಿಯಲ್ಲಿ ಪ್ರಮೋದ್ ಶವ ಪತ್ತೆಯಾಗಿದೆ. ಆಲೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.