ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಮ್ಮೆ ಗೂಳಿಯ ಮಾಲೀಕತ್ವದ ಸಂಬಂಧ ಏರ್ಪಟ್ಟ ಘರ್ಷಣೆಯಿಂದ ಬಳ್ಳಾರಿ ಜಿಲ್ಲೆಯ ಬೊಮ್ಮನಹಾಳ್ ಗ್ರಾಮ ಮತ್ತು ನೆರೆಯ ಆಂಧ್ರಪ್ರದೇಶದ ಮೆದಹಾಳ್ ಗ್ರಾಮಸ್ಥರು ಮೋಕಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಡಿಎನ್‌ಎ ಪರೀಕ್ಷೆ ನಡೆಸಿ ಗೂಳಿಯ ಮಾಲೀಕತ್ವ ಪತ್ತೆ ಮಾಡಬೇಕು ಎಂದು ಬೊಮ್ಮನಹಾಳ್ ಮತ್ತು ಮೆದಹಾಳ್ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಜನವರಿಯಲ್ಲಿ ತಮ್ಮ ಗ್ರಾಮದ ಜಾತ್ರೆಯ ಸಂದರ್ಭದಲ್ಲಿ ಗ್ರಾಮಸ್ಥರು ಬಲಿ ನೀಡಲು ನಿರ್ಧರಿಸಿದ ನಂತರ ಐದು ವರ್ಷದ ಕೋಣವನ್ನು ಇತ್ತೀಚೆಗೆ ಬೊಮ್ಮನಹಾಳ್ ನಲ್ಲಿ ಬಿಡಲಾಗಿತ್ತು. ಆದರೆ ಕೆಲ ದಿನಗಳ ಹಿಂದೆ ಬೊಮ್ಮನಹಾಳ್ ನಿಂದ ನಾಪತ್ತೆಯಾಗಿದ್ದ ಕೋಣ ಮೆದಹಾಳ್ ನಲ್ಲಿ ಪತ್ತೆಯಾಗಿತ್ತು.
ಬೊಮ್ಮನಹಾಳ್‌ನ ಗುಂಪೊಂದು ಮೆದಹಾಳ್‌ಗೆ ತೆರಳಿ ಕೋಣವನ್ನು ಮನೆಗೆ ಕೊಂಡೊಯ್ಯಲು ಮುಂದಾದಾಗ ಗ್ರಾಮಸ್ಥರ ನಡುವೆ ಘರ್ಷಣೆ ನಡೆದು ಹಲವರು ಗಾಯಗೊಂಡಿದ್ದಾರೆ. ಬೊಮ್ಮನಹಾಳ್ ನಿಂದ 20 ಕಿ.ಮೀ ದೂರದಲ್ಲಿರುವ ಮೆದಹಾಳ್ ನಲ್ಲಿ ಈಗ ಕೋಣವಿದೆ. ಕೋಣದ ತಾಯಿ ತಮ್ಮ ಗ್ರಾಮದಲ್ಲಿ ಇರುವುದರಿಂದ ಬೊಮ್ಮನಹಾಳ್ ಗ್ರಾಮಸ್ಥರು ತಮಗೆ ಸೇರಿದ್ದು ಎಂದು ಹೇಳಿಕೊಂಡರೂ ಅದನ್ನು ಕಟ್ಟಿ ಹಾಕಿದ ಮೆದಹಾಳ್ ಜನರು ಈ ವಾದವನ್ನು ಕೊಳ್ಳಲು ಸಿದ್ಧರಿಲ್ಲ.
ಈ ಸಮಸ್ಯೆಗೆ ಪರಿಹಾರವಿಲ್ಲದೇ, ಬೊಮ್ಮನಹಾಳ್ ಮತ್ತು ಮೆದಹಾಳ್ ಗ್ರಾಮಸ್ಥರು ಡಿಎನ್‌ಎ ಪರೀಕ್ಷೆ ನಡೆಸಿ ಗೂಳಿಯ ಪೋಷಕರನ್ನು ನಿರ್ಧರಿಸಬೇಕು ಎಂದು ಒತ್ತಾಯಿಸಿದ್ದಾರೆ. ನಮ್ಮ ಗ್ರಾಮದ ಸಾಕಮ್ಮದೇವಿ ಜಾತ್ರೆಯಲ್ಲಿ ಐದು ವರ್ಷಕ್ಕೊಮ್ಮೆ ಎಮ್ಮೆ ಬಲಿ ಕೊಡಲಾಗುತ್ತದೆ. ಆದರೆ ಈ ಬಾರಿ ಬಲಿ ಕೊಡಲು ಗುರುತಿಸಲಾದ ಎಮ್ಮೆಯನ್ನು ಮೂರು ವರ್ಷಕ್ಕೊಮ್ಮೆ ಇದೇ ರೀತಿಯ ಜಾತ್ರೆ ನಡೆಯುವ ಮೆದಹಾಳ್‌ನ ಜನರು ಹಿಡಿದಿದ್ದಾರೆ. ಬೊಮ್ಮನಹಾಳ್ ಮತ್ತು ಮೆದಹಾಳ್ ಗ್ರಾಮಸ್ಥರ ನಡುವೆ ಸಮಸ್ಯೆ ಶೀಘ್ರ ಇತ್ಯರ್ಥವಾಗಲಿದೆ ಎಂದು ಬೊಮ್ಮನಹಾಳ್ ನ ಹನುಮಂತ ಆರ್, ಭರವಸೆ ವ್ಯಕ್ತಪಡಿಸಿದರು.