ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಪುಷ್ಪ ಮಾರುಕಟ್ಟೆ ನಿರ್ಮಾಣ: ಶಿವಾನಂದ ಪಾಟೀಲ್ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಸುಮಾರು 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಪುಷ್ಪೋದ್ಯಮವಿದ್ದು, ಮಾರಾಟ ಮತ್ತು ರಫ್ತು ಉತ್ತೇಜಿಸಲು ಬೆಂಗಳೂರಿನಲ್ಲಿ ಸುಸಜ್ಜಿತವಾದ ಅಂತಾರಾಷ್ಟ್ರೀಯ ಮಟ್ಟದ ವಾಣಿಜ್ಯ ಪುಷ್ಪ ಮಾರುಕಟ್ಟೆ ನಿರ್ಮಾಣ ಮಾಡಲಾಗುವುದು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ವಿಧಾನಪರಿಷತ್ತಿಗೆ ತಿಳಿಸಿದರು.

ಪ್ರಶ್ನೋತ್ತರದ ವೇಳೆ ಶಾಸಕ ಸಿ. ಎನ್. ಮಂಜೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಾರ್ವಜನಿಕ ಸಹಭಾಗಿತ್ವದ ಬದಲಿಗೆ ಸರ್ಕಾರ ಅಥವಾ ಎಪಿಎಂಸಿಯ ಸ್ವಂತ ನಿಧಿಯಿಂದ ಮಾರುಕಟ್ಟೆ ಅನುಷ್ಠಾನಗೊಳಿಸಲು ನಿರ್ಧರಿಸಿ ಆರ್ಥಿಕ ಇಲಾಖೆಗೆ ಕಡತ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಬೆಂಗಳೂರಿನ ದಾಸನಪುರ, ಮೈಸೂರು, ಕೋಲಾರ ಎಪಿಎಂಸಿಗಳಲ್ಲಿ ಪಿಪಿಪಿ ಮಾದರಿಯಲ್ಲಿ ಬಯೋ ಸಿಎನ್ಜಿ ಪ್ಲಾಂಟ್ ಗಳ ಸ್ಥಾಪನೆಗೆ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ ಅನುಮೋದನೆ ಪಡೆಯಲು ಡಿಪಿಆರ್ ಹಾಗೂ ಆರ್ಎಫ್ಪಿಗಳನ್ನು ಸಲ್ಲಿಸಲಾಗಿದೆ. ರಾಯಚೂರಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತವಾದ ಒಣಮೆಣಸಿನಕಾಯಿ ಮಾರುಕಟ್ಟೆ ನಿರ್ಮಿಸಲು ಅನುಮೋದನೆಯಾಗಿದ್ದು, ಟೆಂಡರ್ ಕರೆಯಲಾಗಿದೆ.

ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿರುವ ಮಾರುಕಟ್ಟೆಯಲ್ಲಿ 35 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಕೃಷಿ ಸಂಕೀರ್ಣ ನಿರ್ಮಿಸಲು ವಿಸ್ತೃತ ಯೋಜನಾ ವರದಿ ಪಡೆಯಲಾಗಿದ್ದು, ಪರಿಶೀಲನೆ ಹಂತದಲ್ಲಿದೆ ಎಂದು ತಿಳಿಸಿದರು.

ರಾಜ್ಯದ ಎಲ್ಲ ಎಪಿಎಂಸಿಗಳ ಕಾರ್ಯ ಚಟುವಟಿಕೆಗಳನ್ನು 10 ಕೋಟಿ ರೂ. ಡಿಜಿಟಲೀಕರಣ ಮಾಡಲು ನಿರ್ಧರಿಸಲಾಗಿದೆ. ಸೆಂಟರ್ ಫಾರ್ ಸ್ಮಾರ್ಟ್ ಗವರ್ನಸ್ ಸಹಾಯದೊಂದಿಗೆ ಇಆರ್ ಪಿ ಅಭಿವೃದ್ಧಿಪಡಿಸಲಾಗುತ್ತಿದೆ. 8 ಮಾಡ್ಯೂಲ್ ಗಳಲ್ಲಿ 4 ಮಾಡ್ಯೂಲ್ ಗಳು ಪೂರ್ಣಗೊಂಡಿದ್ದು, ಇತರ 4 ಪ್ರಗತಿಯಲ್ಲಿವೆ.

ಬಳ್ಳಾರಿ, ಗದಗ, ರಾಣೆಬೆನ್ನೂರು, ಹಾಗೂ ಮೈಸೂರು ಎಪಿಎಂಸಿಗಳಲ್ಲಿ ಶೀತಲಗೃಹ ನಿರ್ಮಿಸಲು ಟೆಂಡರ್ ಕರೆಯಲಾಗಿದೆ. ಬಸವನಬಾಗೇವಾಡಿ ಮತ್ತು ಯಲಬುರ್ಗಗಳಲ್ಲಿ ಆರ್ ಡಿಎಫ್ 29ರ ಅಡಿ ಶೀತಲಗೃಹ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ನಬಾರ್ಡ್ ಅಡಿ ಅಭಿವೃದ್ಧಿ

ನಬಾರ್ಡ್ ಕಾಮಗಾರಿಗಳ ಯೋಜನೆ ಅಡಿಯಲ್ಲಿ ಗ್ರಾಮೀಣ ಮಾರುಕಟ್ಟೆಗಳ ಅಭಿವೃದ್ಧಿ ಮಾಡಲಿದ್ದು, ಆರ್ ಡಿಎಫ್ -28 ಅಡಿ ಸುಮಾರು 179.13 ಕೋಟಿ ರೂ. ವೆಚ್ಚದಲ್ಲಿ 18 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಅವುಗಳಲ್ಲಿ 6 ಪೂರ್ಣಗೊಂಡಿವೆ. 11 ಪ್ರಗತಿಯಲ್ಲಿದ್ದು, ಒಂದು ಕಾಮಗಾರಿ ಕೈಬಿಡಲಾಗಿದೆ ಎಂದು ಸಚಿವರು ತಿಳಿಸಿದರು.

ಆರ್ ಡಿಎಫ್ -28ರ ಅಡಿ ಅಂದಾಜು 210 ಕೋಟಿ ರೂ. ವೆಚ್ಚದಲ್ಲಿ 70 ಕಾಮಗಾರಿಗಳನ್ನು ಕೈಗೊಂಡಿದ್ದು, 28 ಮುಗಿದಿವೆ, 42 ಕಾಮಗಾರಿಗಳು ಪ್ರಗತಿಯಲ್ಲಿವೆ.

ಆರ್ ಡಿಎಫ್ -30ರ ಅಡಿಯಲ್ಲಿ 144.75 ಕೋಟಿ ರೂ. ವೆಚ್ಚದಲ್ಲಿ 10 ಕಾಮಗಾರಿ ಕೈಗೊಂಡಿದ್ದು, ಟೆಂಡರ್ ಕರೆಯಲಾಗಿದೆ . ಎಪಿಎಂಸಿ ಮಾರುಕಟ್ಟೆ ಶುಲ್ಕ ಮತ್ತು ಬಳಕೆದಾರರ ಶುಲ್ಕದಲ್ಲಿ ಮಾರುಕಟ್ಟೆ ಪ್ರಾಂಗಣದಲ್ಲಿ ರೈತಭವನ, ಮುಚ್ಚು ಹರಾಜುಕಟ್ಟೆ, ಶೌಚಾಲಯ, ರಸ್ತೆ, ಚರಂಡಿ, ಗೋದಾಮು, ಮಳಿಗೆ ಮತ್ತಿತರ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ವಿವರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here