ಹೊಸದಿಗಂತ ಡಿಜಿಟಲ್ ಡೆಸ್ಕ್:
“ಬೆಂಗಳೂರಿಗೆ ಹೊಸ ರೂಪ ನೀಡುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ನಲ್ಲಿ ಪ್ರಮುಖ ಯೋಜನೆಗಳನ್ನು ಘೋಷಿಸಿದ್ದಾರೆ. ಇದಕ್ಕೆ ಪೂರಕವಾಗಿ ಸಧ್ಯದಲ್ಲೇ ಪಾಲಿಕೆ ಬಜೆಟ್ ಮಂಡನೆಯಾಗಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಬೆಂಗಳೂರು ವಿವಿಯ ಜ್ಞಾನಭಾರತಿ ಬಿಪೆಡ್ ಮೈದಾನದಲ್ಲಿ ಭಾನುವಾರ ನಡೆದ “ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಬೆಂಗಳೂರಿನ ಹೊಸ ಯೋಜನೆಗಳಿಗೆ ಸಂಪನ್ಮೂಲ ಕ್ರೋಡೀಕರಿಸಲು ನಮ್ಮದೇ ಆದ ಯೋಜನೆಗಳಿವೆ. ಬೆಂಗಳೂರಿನಲ್ಲಿ ಇನ್ನು ಮುಂದೆ ಮೆಟ್ರೋ ಹೋಗುವ ಮಾರ್ಗದಲ್ಲಿ ಫ್ಲೈಓವರ್ ನಿರ್ಮಾಣಕ್ಕೂ ತೀರ್ಮಾನ ಮಾಡಲಾಗಿದೆ. ಈ ಬಗ್ಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದರು.
ನೀವು ನಿಮ್ಮ ಸಮಸ್ಯೆ ತೆಗೆದುಕೊಂಡು ನಮ್ಮ ಮನೆ ಬಾಗಿಲಿಗೆ ಸುತ್ತ ಬಾರದು ಎಂದು ನಾನೇ ನಿಮ್ಮ ಮನೆ ಬಾಗಿಲಿಗೆ ಬಂದು ನಿಮ್ಮ ಸಮಸ್ಯೆ ಆಲಿಸುತ್ತಿದ್ದೇನೆ. ನಮ್ಮ ಸರ್ಕಾರ ಸದಾ ನಿಮ್ಮ ಜತೆ ಇರಲಿದೆ. ನಿಮ್ಮ ಎಲ್ಲಾ ಸಮಸ್ಯೆ ಒಂದೇ ದಿನದಲ್ಲಿ ಬಾಗೆ ಹರಿಸಲು ಆಗುವುದಿಲ್ಲ. ಆದರೆ ಹಂತ ಹಂತವಾಗಿ ಬಾಗೆಹರಿಸುತ್ತೇವೆ. ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳಿಂದ ಕೆಲಸ ಆಗದಿದ್ದಾಗ ಮಾತ್ರ ನೀವು ನಿಮ್ಮ ಸಮಸ್ಯೆಯನ್ನು ನಮ್ಮ ಬಳಿಗೆ ತರುತ್ತೀರಿ ಎಂದು ಹೇಳಿದರು.