ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲೇಷ್ಯಾದ ಸೆಲಂಗೋರ್‌ನಲ್ಲಿ ಭಾನುವಾರ ಮುಕ್ತಾಯ ಕಂಡ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಬಲಿಷ್ಠ ಥಾಯ್ಲೆಂಡ್ ತಂಡವನ್ನು 3-2 ರಿಂದ ಮಣಿಸುವ ಮೂಲಕ ಭಾರತ ಮಹಿಳಾ ತಂಡ ಇತಿಹಾಸ ನಿರ್ಮಾಣ ಮಾಡಿದೆ.
ಟೀಮ್ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಇದೇ ಮೊದಲ ಭಾರಿಗೆ ಚಾಂಪಿಯನ್ ಆಗಿದೆ. ಅನುಭವಿ ಆಟಗಾರ್ತಿ ಪಿವಿ ಸಿಂಧು, ಗಾಯತ್ರಿ ಗೋಪಿಚಂದ್-ಟ್ರೇಸಾ ಜಾಲಿ ಹಾಗೂ 16 ವರ್ಷದ ಸೆನ್ಸೇಷನಲ್ ಸ್ಟಾರ್ ಅನ್ಮೋಲ್ ಖ್ರಾಬ್ ತಮ್ಮ ಪಂದ್ಯಗಳನ್ನು ಗೆಲ್ಲುವ ಮೂಲಕ ಶಾ ಅಲಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ 3-2 ಅಂತರದಿಂದ ಗೆಲವು ಕಂಡಿತು.
ಎರಡು ವರ್ಷಗಳ ಹಿಂದೆ ಭಾರತ ಬ್ಯಾಡ್ಮಿಂಟನ್ ಕ್ರೀಡೆಯ ಪ್ರತಿಷ್ಠಿತ ಟೂರ್ನಿಯಾಗಿದ್ದ ಥಾಮಸ್ ಕಪ್‌ನಲ್ಲಿ ಗೆಲುವು ಕಂಡಿತ್ತು. ಈ ಬಾರಿ ಸಂಭ್ರಮಿಸುವ ಸರದಿ ಮಾತ್ರ ಭಾರತ ಮಹಿಳಾ ತಂಡದ್ದಾಗಿತ್ತು, ಟೂರ್ನಿಯುದ್ದಕ್ಕೂ ಅದ್ಭುತ ನಿರ್ವಹಣೆ ನೀಡಿದ್ದ ಭಾರತ ತಂಡ, ಬಲಿಷ್ಠ ತಂಡಗಳಾದ ಚೀನಾ, ಹಾಂಕಾಂಗ್, ಜಪಾನ್ ಹಾಗೂ ಥಾಯ್ಲೆಂಡ್ ತಂಡವನ್ನು ಮಣಿಸಿ ಟ್ರೋಫಿಗೆ ಮುತ್ತಿಟ್ಟಿದೆ. ಗಾಯದಿಂದ ಚೇತರಿಸಿಕೊಂಡು ಆಡುತ್ತಿರುವ ಮೊದಲ ಟೂರ್ನಿಯಲ್ಲಿಯೇ ಪಿವಿ ಸಿಂಧು ಮಿಂಚಿನ ನಿರ್ವಹಣೆ ತೋರಿಸಿದರು. 39 ನಿಮಿಷಗಳ ಮೊದಲ ಸಿಂಗಲ್ಸ್ ಪಂದ್ಯದಲ್ಲಿ ಸುಪನಿಂದಾ ಕತೆತೊಂಗ್‌ರನ್ನು 21-12, 21-12 ರಿಂದ ಮಣಿಸಿ ಭಾರತಕ್ಕೆ 1-0 ಮುನ್ನಡೆ ನೀಡಿದ್ದರು.ನಂತರ ನಡೆದ ಡಬಲ್ಸ್ ಪಂದ್ಯದಲ್ಲಿ ಗಾಯತ್ರಿ ಗೋಪಿಚಂದ್ ಹಾಗೂ ಜೊಲ್ಲಿ ಟ್ರೇಸಾ ಜೋಡಿ ಮೂರು ಗೇಮ್‌ಗಳ ಹೋರಾಟದಲ್ಲಿ ಜೊಂಗ್‌ಕೋಲ್ಫಾಮ್ ಕಿಟಿತಾರಾಕುಲ್ ಮತ್ತು ರಾವ್ವಿಂಡ ಪ್ರಜೊಂಗ್ಜಲ್‌ರನ್ನು 21-16. 18-21, 21-16 ರಿಂದ ಸೋಲಿಸಿದರು. ಅಂತಿಮ ಗೇಮ್‌ನಲ್ಲಿ 6-11 ರಿಂದ ಹಿಂದಿದ್ದ ಭಾರತದ ಜೋಡಿ ಭರ್ಜರಿಯಾಗಿ ತಿರುಗೇಟು ಮೂಲಕ ಗೆಲುವು ಕಂಡಿತು.