ಹೊಸದಿಗಂತ ವರದಿ, ಬಳ್ಳಾರಿ:
ಗಣಿನಾಡು ಬಳ್ಳಾರಿಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಬೇಕು ಎನ್ನುವ ಕನಸು ಸಾಕಾರಗೊಳ್ಳುವ ಕಾಲ ಸನ್ನಿಹಿತವಾಗಿದ್ದು, ನಗರದ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಅವರು ಅಧಿಕಾರಿಗಳೊಂದಿಗೆ ಸೋಮವಾರ ಸ್ಥಳ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಅವರು ಮಾತನಾಡಿ, ಗಣಿನಾಡು ಬಳ್ಳಾರಿ ಗಣಿಗಾರಿಕೆಗೆ ಅಷ್ಟೇ ಹೆಚ್ಚು ಪ್ರಸಿದ್ಧಿಯಾಗಿಲ್ಲ, ಕಲೆ, ಸಂಗೀತ, ಸಾಹಿತ್ಯ ಕ್ಷೇತ್ರದಲ್ಲೂ ಬಳ್ಳಾರಿ ಜಿಲ್ಲೆ ದೇಶ ವಿದೇಶಗಳಲ್ಲಿ ಗಮನಸೆಳೆದಿದೆ. ಬಳ್ಳಾರಿ ಅಂದ ಕೂಡಲೇ ಗಣಿಗಾರಿಕೆ ಎಲ್ಲರ ಕಣ್ಮುಂದೆ ಬರುತ್ತಿತ್ತು, ಇದರ ಜೊತೆಗೆ ನಮ್ಮ ಜಿಲ್ಲೆ ಕಲೆಯಲ್ಲೂ ಶ್ರೀಮಂತಿಕೆ ಪಡೆದಿದೆ, ಜಿಲ್ಲೆಯಲ್ಲಿ ಜೋಳದರಾಶಿ ದೊಡ್ಡನಗೌಡರು, ಮಂಜಮ್ಮ ಜೋಗತಿ, ದರೋಜಿ ಈರಮ್ಮ, ಬೆಳಗಲ್‌ವಿರಣ್ಣ, ರಮೇಶ್ ಗೌಡ ಪಾಟೀಲ್ ಸೇರಿದಂತೆ ಅನೇಕ ಜನರು ಕಲಾವಿದರು ಇದ್ದಾರೆ, ಕಲೆಯಲ್ಲೂ ನಮ್ಮ ಜಿಲ್ಲೆ ಶ್ರೀಮಂತಿಕೆ ಯಾಗಿದ್ದು, ಕ್ರೀಡೆಯಲ್ಲೂ ಹೆಚ್ಚು ಸಾಧನೆ ಮಾಡಿ ಜಿಲ್ಲೆಯ ಕೀರ್ತಿ ಹೆಚ್ಚಿಸಬೇಕು ಎಂದು ಕ್ರೀಡಾಪಟುಗಳು ತುದಿಗಾಲ ಮೇಲೆ ನಿಂತಿದ್ದಾರೆ ಎಂದರು.
ನಗರದಲ್ಲಿ ಅಂತರಾಷ್ಟ್ರೀಯ ಸುಸಜ್ಜಿತ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಬೇಕು ಎನ್ನುವ ಬೇಡಿಕೆ ಮೊದಲಿನಿಂದಲೂ ಇದೆ, ವಿಶೇಷವಾಗಿ ಮಾಜಿ ಸಚಿವ, ಸಹೋದರ ಗಾಲಿ ಜನಾರ್ಧನ ರೆಡ್ಡಿ ಅವರ ಕನಸಾಗಿದೆ. ಅದು ಈಗ ಸಾಕಾರಗೊಳ್ಳುವ ಕಾಲ ಕೂಡಿ ಬಂದಿದೆ. ಕ್ರೀಡಾಂಗಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿರುವೆ, ಶೀಘ್ರದಲ್ಲೇ ನಗರದಲ್ಲಿ ಅಂತರಾಷ್ಟ್ರೀಯ ಕ್ರೀಡಾಂಗಣ ತಲೆ ಎತ್ತಲಿದೆ ಎಂದರು. ಈ ಸಂದರ್ಭದಲ್ಲಿ ಕೆ.ಎಸ್.ಸಿ ಸದಸ್ಯರಾದ ಶಶಿಧರ್, ಅಲಿಖಾನ್, ಎಪಿಎಂಸಿ ಸದಸ್ಯ ಜಿ.ಕೃಷ್ಣಾ ರೆಡ್ಡಿ, ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗಳು ಇತರರು ಉಪಸ್ಥಿತರಿದ್ದರು.