ಸಚಿವ ಸಂಪುಟ ವಿಸ್ತರಣೆ: ಸ್ಥಾನ ಸಿಗುವ ವಿಶ್ವಾಸದಲ್ಲಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ

ಹೊಸದಿಗಂತ ವರದಿ, ಚಿತ್ರದುರ್ಗ

ಸಚಿವ ಸಂಪುಟದಲ್ಲಿ ಸ್ಥಾನ ಸಿಗದಿರುವ ಬಗ್ಗೆ ಬೇಸರವಿದೆ. ಆದರೆ ಪಕ್ಷಕ್ಕೆ ಮುಜುಗರ ತರುವುದು ನನ್ನ ಹಿರಿತನದ ಲಕ್ಷಣ ಅಲ್ಲ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯೆ ನೀಡುರುವ ಅವರು, ನಾನು ಯಾವುದೇ ರೀತಿ ಪಕ್ಷಕ್ಕೆ ಮುಜುಗರ ಆಗುವ ರೀತಿ ವರ್ತಿಸಿಲ್ಲ. ನಮ್ಮ ಹಿರಿಯತನಕ್ಕೆ ಸಚಿವ ಸ್ಥಾನ ಕೊಡಲಿಲ್ಲ ಎಂದು ಜನರಲ್ಲಿ ಅಸಮಾಧಾನವಿದೆ. ಅದನ್ನು ಪಕ್ಷ ಗಮನಿಸಿ, ಈ ಬಾರಿ ಅವಕಾಶ ಮಾಡಿಕೊಡುತ್ತಾರೆ ಎಂಬ ಆಶಾಭಾವನೆ ಇದೆ ಎಂದರು.
ಪ್ರತಿಯೊಬ್ಬರಿಗೂ ಆದ್ಯತೆ ಹಾಗೂ ಪ್ರತಿಯೊಂದು ಸಮುದಾಯ ಗುರುತಿಸುವ ಪಕ್ಷ ಬಿಜೆಪಿ. ಸಾಮಾಜಿಕ ನ್ಯಾಯದ ಬಗ್ಗೆ ಅತ್ಯಂತ ಕಳಕಳಿ ಇರುವ ಪಕ್ಷ ಬಿಜೆಪಿ. ಆದರೆ ಈ ವಿಚಾರದಲ್ಲಿ ನಮ್ಮ ರಾಜ್ಯದಲ್ಲಿ ತಾರತಮ್ಯ ಆಗಿದೆ. ರಾಜ್ಯದ ಹಲವು ಸಮುದಾಯಗಳಲ್ಲಿ ಅಸಮಾಧಾನ ಇದೆ. ಉತ್ತರಪ್ರದೇಶದ ರೀತಿ ಸಂಪುಟ ವಿಸ್ತರಣೆ ಮಾಡುವಲ್ಲಿ ನಮ್ಮ ರಾಜ್ಯದಲ್ಲಿ ಲೋಪವಾಗಿದೆ ಎಂದು ಹೇಳಿದರು.
ಸಂಕ್ರಾಂತಿ ಬಳಿಕ ಮಂತ್ರಿ ಮಂಡಲ ಪುನರ್ ರಚನೆ ಮಾಡುತ್ತಾರೆ ಎನ್ನಲಾಗಿತ್ತು. ಆದರೆ ಮಾರ್ಚ್, ಏಪ್ರಿಲ್‌ನಲ್ಲಿ ಮಾಡುವ ಬಗ್ಗೆ ಚರ್ಚೆಯಾಗುತ್ತಿದೆ. ಏಪ್ರಿಲ್‌ನಲ್ಲಿ ಮಾಡಿದರೆ ಕೇವಲ ೧೧ ತಿಂಗಳು ಉಳಿಯುತ್ತದೆ. ಜಿ.ಪಂ., ತಾ.ಪಂ. ಚುನಾವಣೆ ಘೋಷಣೆ ಆದಲ್ಲಿ ನೀತಿ ಸಂಹಿತೆ ಜಾರಿಯಾಗುತ್ತದೆ. ಹಾಗಾಗಿ ಹೊಸ ಮಂತ್ರಿಗಳನ್ನು ಮಾಡೋದ್ರಿಂದ ಏನು ಪ್ರಯೋಜನ. ಅವರ ಕ್ಷೇತ್ರಕ್ಕೆ ಕೆಲಸ ಮಾಡುವ ಅವಕಾಶ ಸಿಗಬೇಕಲ್ವಾ, ಸುಮ್ಮನೆ ಮಂತ್ರಿ ಆಗಬೇಕು, ಮಾಜಿ ಮಂತ್ರಿ ಆಗಬೇಕೆನ್ನುವ ದೃಷ್ಟಿ ನಮಗಿಲ್ಲ. ಇದರಿಂದ ತಕ್ಷಣವೇ ಸಂಪುಟ ವಿಸ್ತರಣೆ ಮಾಡುವುದು ಸೂಕ್ತ ಎಂದರು.
ಮಂತ್ರಿಯಾಗಿ ಅನುಭವ ಇಲ್ಲದೇ ಇರಬಹುದು. ಆದರೆ ಅನೇಕ ಬಾರಿ ಶಾಸಕರಾಗಿ ಮಂತ್ರಿಮಂಡಲದಲ್ಲಿ ಇರುವವರಿಗಿಂತ ಹೆಚ್ಚು ಅನುಭವ ಪಡೆದಿದ್ದೇನೆ. ಮಾಜಿ ಸಿಎಂ ಬಿಎಸ್‌ವೈ ನಮ್ಮ ಮನೆಗೆ ಭೇಟಿ ನೀಡಿದ್ದ ವೇಳೆ ನನ್ನ ಕಾಲದಲ್ಲಿ ತಿಪ್ಪಾರೆಡ್ಡಿಗೆ ಅನ್ಯಾಯವಾಗಿದೆ ಎಂದು ಹೇಳಿದ್ದರು. ಬೊಮ್ಮಾಯಿ ಅವರ ಬಳಿ ಈ ಕುರಿತು ಮಾತನಾಡುವುದಾಗಿ ತಿಳಿಸಿದ್ದರು. ಅವರ ದೊಡ್ಡತನಕ್ಕೆ ನನ್ನ ಅಭಿನಂದನೆಗಳು. ಆದರೆ ಅವರ ಜೊತೆ ಮಾತನಾಡಿದಿರಾ ಎಂದು ನಾನು ಕೇಳುವ ವರ್ತನೆ ಮಾಡಲ್ಲ. ಈ ಬಗ್ಗೆ ಗಮನ ಹರಿಸಿ ಈ ಬಾರಿ ನ್ಯಾಯ ಕೊಡಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!