April 29, 2026
Wednesday, April 29, 2026
spot_img

ಚಿಕನ್ ಬಿಟ್ಟು ಮಟನ್ ಮೊರೆ ಹೋದ ಗ್ರಾಹಕರು: ವಾತಾವರಣದ ವೈಪರೀತ್ಯಕ್ಕೆ ಕೋಳಿ ಉದ್ಯಮ ತತ್ತರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿರುವ ತೀವ್ರ ಶೀತ ವಾತಾವರಣವು ಕೇವಲ ಜನಸಾಮಾನ್ಯರ ಜೀವನವನ್ನಷ್ಟೇ ಅಲ್ಲದೆ, ಮಾಂಸದ ಮಾರುಕಟ್ಟೆಯನ್ನೂ ನಡುಗಿಸಿದೆ. ಅದರಲ್ಲೂ ವಿಶೇಷವಾಗಿ ಕೋಲಾರ ಜಿಲ್ಲೆಯಲ್ಲಿ ಚಳಿಯ ತೀವ್ರತೆಗೆ ಕೋಳಿಗಳ ಬೆಳವಣಿಗೆ ಕುಂಠಿತವಾಗಿದ್ದು, ಚಿಕನ್ ಮತ್ತು ಮೊಟ್ಟೆಯ ಬೆಲೆ ಗಗನಕ್ಕೇರಿದೆ.

ಕಳೆದ ಕೆಲವು ತಿಂಗಳುಗಳ ಹಿಂದೆ ಪ್ರತಿ ಕೆಜಿಗೆ 180 ರಿಂದ 200 ರೂಪಾಯಿ ಇದ್ದ ಕೋಳಿ ಮಾಂಸದ ದರ, ಈಗ ಏಕಾಏಕಿ 280 ರಿಂದ 300 ರೂಪಾಯಿಗೆ ತಲುಪಿದೆ. ಚಳಿಗಾಲದಲ್ಲಿ ಸಾಮಾನ್ಯವಾಗಿ ಮಾಂಸಕ್ಕೆ ಬೇಡಿಕೆ ಹೆಚ್ಚಿರುತ್ತದೆ, ಆದರೆ ಉತ್ಪಾದನೆ ಕುಸಿದಿರುವುದು ಈ ಬೆಲೆ ಏರಿಕೆಗೆ ಮುಖ್ಯ ಕಾರಣವಾಗಿದೆ.

ಕೋಳಿ ಫಾರಂಗಳಲ್ಲಿ ಸಕಾಲಕ್ಕೆ ಆಹಾರ, ನೀರು ಮತ್ತು ಔಷಧೋಪಚಾರ ನೀಡಿದರೂ, ಸೂರ್ಯನ ಬೆಳಕಿನ ಕೊರತೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಬಿಸಿಲು ಕಡಿಮೆಯಾಗಿರುವುದರಿಂದ ಮತ್ತು ಚಳಿಯ ಪ್ರಭಾವದಿಂದಾಗಿ 2.2 ಕೆಜಿ ಬರಬೇಕಿದ್ದ ಕೋಳಿಗಳು ಕೇವಲ 1.8 ಕೆಜಿಯಷ್ಟೇ ತೂಗುತ್ತಿವೆ.

ತಿಂಗಳಿಗೆ ಸರಾಸರಿ 28 ರಿಂದ 30 ಮೊಟ್ಟೆ ಇಡುತ್ತಿದ್ದ ಕೋಳಿಗಳು, ಈಗ ಕೇವಲ 22 ರಿಂದ 24 ಮೊಟ್ಟೆಗಳನ್ನು ಮಾತ್ರ ಇಡುತ್ತಿವೆ.

ಚಿಕನ್ ದರವು ಮಟನ್ ದರದ ಹತ್ತಿರಕ್ಕೆ ಬರುತ್ತಿರುವುದರಿಂದ, ಅನೇಕ ಗ್ರಾಹಕರು “300 ರೂಪಾಯಿ ನೀಡಿ ಚಿಕನ್ ತಿನ್ನುವ ಬದಲು ಸ್ವಲ್ಪ ಹೆಚ್ಚು ಹಣ ನೀಡಿ ಮಟನ್ ತಿನ್ನಬಹುದು” ಎಂಬ ನಿರ್ಧಾರಕ್ಕೆ ಬರುತ್ತಿದ್ದಾರೆ. ಇದರಿಂದ ಮಾರುಕಟ್ಟೆಯಲ್ಲಿ ಚಿಕನ್ ಮತ್ತು ಮೊಟ್ಟೆಗೆ ಇದ್ದ ಬೇಡಿಕೆ ಸ್ವಲ್ಪ ಮಟ್ಟಿಗೆ ತಗ್ಗಿದೆ. ಉತ್ಪಾದನೆ ಕಡಿಮೆ ಇರುವುದರಿಂದ ದರ ಹೆಚ್ಚಳವಾಗಿದೆ, ಇದು ಮಾರಾಟಗಾರರು ಮತ್ತು ಗ್ರಾಹಕರ ಮೇಲೆ ಪರಿಣಾಮ ಬೀರಿದ್ದರೂ, ಕೆಲವು ಫಾರಂ ಮಾಲೀಕರಿಗೆ ಸದ್ಯಕ್ಕೆ ದೊಡ್ಡ ಮಟ್ಟದ ನಷ್ಟವೇನೂ ಸಂಭವಿಸಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !