ಹೊಸದಿಗಂತ ವರದಿ,ಮಡಿಕೇರಿ:
ಹಿಜಾಬ್ ಕುರಿತ ವಿವಾದ ಕೊಡಗು ಜಿಲ್ಲೆಯಲ್ಲಿ ಗುರುವಾರವೂ ಮುಂದುವರಿದಿದ್ದು,ಮಂಗಳೂರು ವಿಶ್ವವಿದ್ಯಾನಿಲಯದ ಅಧೀನ ಸಂಸ್ಥೆಯಾದ ಮಡಿಕೇರಿಯ ಫೀ.ಮಾ.ಕಾರ್ಯಪ್ಪ ಕಾಲೇಜಿಗೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರು ತಮಗೆ ತರಗತಿಗೆ ಪ್ರವೇಶ ನೀಡುವಂತೆ ಪಟ್ಟು ಹಿಡಿದಿದ್ದಾರೆ.
ಆದರೆ, ಉಚ್ಛ ನ್ಯಾಯಾಲಯ ಹಾಗೂ ಸರಕಾರದ ಆದೇಶದನ್ವಯ ಕಾಲೇಜು ಆವರಣದೊಳಗೆ ಹಿಜಾಬ್ ಧರಿಸಲು ಅವಕಾಶವಿಲ್ಲ ಎಂದು ಪ್ರಾಂಶುಪಾಲಕಗತದ ತಿಮ್ಮಯ್ಯ ಅವರು ವಿದ್ಯಾರ್ಥಿನಿಯರ ಮನವೊಲಿಸುವ ಪ್ರಯತ್ನ ಮಾಡಿದರಾದರೂ, ಈ ಕುರಿತು ಲಿಖಿತವಾಗಿ ನೀಡುವಂತೆ ಕೆಲವರು ಒತ್ತಾಯಿಸಿದ ಪ್ರಸಂಗವೂ ನಡೆಯಿತು.
ಈ ನಡುವೆ ಕೆಲವು ವಿದ್ಯಾರ್ಥಿನಿಯರು ಹಾಗೂ ಪೋಷಕರು ‘ನಮ್ಮ ಧರ್ಮ ನಮಗೆ ಹಿಜಾಬ್ ಧರಿಸಲು ತಿಳಿಸಿರುವಂತೆ, ಶಿಕ್ಷಣ ಪಡೆಯುವಂತೆಯೂ ಸೂಚಿಸಿದೆ. ಆದ್ದರಿಂದ ಹಿಜಾಬ್ ಕಾರಣಕ್ಕಾಗಿ ಶಿಕ್ಷಣದಿಂದ ವಂಚಿತರನ್ನಾಗಿಸದಿರಿ ಎಂದು ಪ್ರಾಂಶುಪಾಲರಿಗೇ ಮನವರಿಕೆ ಮಾಡುವ ಪ್ರಯತ್ನ ಮಾಡಿದರು.
ಆದರೆ, ಸರಕಾರ ಅಥವಾ ಜಿಲ್ಲಾಡಳಿತದ ಆದೇಶ ನೀಡುವವರೆಗೆ ಹಿಜಾಬ್’ನೊಂದಿಗೆ ತರಗತಿ ಪ್ರವೇಶಿಸಲು ಯಾರಿಗೂ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಪ್ರಾಂಶುಪಾಲರು ಸ್ಪಷ್ಟಪಡಿಸಿದರು. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿನಿಯರು ಕಾಲೇಜು ಗೇಟ್ ಬಳಿ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು.
ಆರರಿಂದ ಒಂಭತ್ತಕ್ಕೆ ಏರಿಕೆ:ಅತ್ತ ಶನಿವಾರಸಂತೆ ಭಾರತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಆರು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದರೆ, ಗುರುವಾರ ಈ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.
ಹಿಜಾಬ್ ಧರಿಸಿ ಬಂದವರಿಗೆ ಪ್ರವೇಶ ನಿರಾಕರಿಸಿದಾಗ, ನಾವು ಯಾವುದೇ ಕಾರಣಕ್ಕೂ ಹಿಜಾಬ್ ತೆಗೆಯುವುದಿಲ್ಲ. ಹಿಜಾಬ್ ಧರಿಸಲು ಪೋಷಕರು ಸೂಚಿಸಿದ್ದು, ಹಿಜಾಬ್ ತೆಗೆಯುವುದಾದರೆ ಕಾಲೇಜಿಗೆ ಹೊಗಬೇಡಿ ಎನ್ನುತ್ತಾರೆ.ನಮಗೆ ವಿದ್ಯಾಭ್ಯಾಸದ ಜೊತೆಗೆ ಹಿಜಾಬ್ ಕೂಡಾ ಮುಖ್ಯವಾಗಿದ್ದು,ನಮ್ಮ ಧರ್ಮದಲ್ಲಿ ಹಿಜಾಬ್ ಧರಿಸದೆ ಹೊರಗೆ ಹೋಗುವಂತಿಲ್ಲ.ಆದ್ದರಿಂದ ನಮಗೆ ಆನ್’ಲೈನ್ ತರಗತಿ ಮಾಡಿ ಎಂಬ ಬೇಡಿಕೆ ಮಂಡಿಸಿದರು.
ಕಾಲೇಜು ಆಡಳಿತ ಮಂಡಳಿ ಕಾರ್ಯದರ್ಶಿ ಜಗನ್ ಪಾಲ್ ಹಾಗೂ ಪಾಂಶುಪಾಲ ದಯಾನಂದ್ ವಿದ್ಯಾರ್ಥಿನಿಯರಿಗೆ ಮನವರಿಕೆ ಮಾಡಿದರೂ, ವಿದ್ಯಾರ್ಥಿನಿಯರು ಹಿಜಾಬ್ ತೆಗೆಯಲು ಒಪ್ಪಲಿಲ್ಲ.
ಹೈಕೊರ್ಟ್ ಮಧ್ಯಂತರ ಆದೇಶವಿರುವುದರಿಂದ ಹಿಜಾಬ್ ತೆಗೆಯಲು ತಿಳಿಸಿದ್ದೇವೆ. ತೆಗೆಯಲು ಒಪ್ಪದಿದ್ದಾಗ ಬಂದಿದ್ದ ಎಲ್ಲಾ 9 ವಿದ್ಯಾರ್ಥಿನಿಯರಿಗೆ ಮನವರಿಕೆ ಮಾಡಿದ್ದೇವೆ. ಆದರೆ ಅವರು ಹಿಜಾಬ್ ತೆಗೆಯಲು ಒಪ್ಪದ್ದರಿಂದ ವಾಪಸ್ ಕಳುಹಿಸಿದ್ದೇವೆ ಎಂದು ಕಾಲೇಜು ಆಡಳಿತ ಮಂಡಳಿ ಕಾರ್ಯದರ್ಶಿ ಜಗನ್ ಪಾಲ್ ಹೇಳಿದರು.
ಭಾರತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಒಟ್ಟು 12 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಪ್ರತಿ ನಿತ್ಯ ಬರುತ್ತಿದ್ದರೆನ್ನಲಾಗಿದ್ದು, ಗುರುವಾರ 3 ವಿದ್ಯಾರ್ಥಿನಿಯರು ಗೈರು ಹಾಜರಾಗಿದ್ದರು.
ಶನಿವಾರಸಂತೆ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಪರಶಿವಮೂರ್ತಿ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಿದ್ದರು.
ನೆಲ್ಯಹುದಿಕೇರಿ: ಇತ್ತ ನೆಲ್ಯಹುದಿಕೇರಿ ಕರ್ನಾಟಕ ಪಬ್ಲಿಕ್ ಸ್ಕೂಲ್’ಗೆ ಹಿಜಾಬ್ ಧರಿಸಿ ಬಂದ 11 ವಿದ್ಯಾರ್ಥಿನಿಯರಿಗೆ ನಾಲ್ಕನೆಯ ದಿನವೂ ಶಾಲೆಯ ಪ್ರವೇಶ ನಿರಾಕರಿಸಲಾಯಿತು.
ಹಿಜಾಬ್ ಧರಿಸುವುದಾದರೆ ನಾಳೆಯಿಂದ ಶಾಲೆಗೆ ಬರಬೇಡಿ, ನಿಮಗೆ ಆನ್’ಲೈನ್ ತರಗತಿ ಮಾಡಲಾಗುವುದೆಂದು ಶಾಲೆಯ ಶಿಕ್ಷಕರು ನಿನ್ನೆ ದಿನ ಮೌಖಿಕವಾಗಿ ಹೇಳಿದ್ದಾರೆಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಆದರೆ ಇದರ ಬಗ್ಗೆ ಪೋಷಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಶಾಲೆಗೆ ಪ್ರವೇಶ ನಿರಾಕರಣೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಶಾಲಾ ವಠಾರದಲ್ಲೇ ಕುಳಿತು ಕಲಿಯುತ್ತಿದ್ದಾರೆ. ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.