ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಭಾರತದಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ರಾಜಧಾನಿ ದೆಹಲಿಯಲ್ಲಿಯೂ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಹಾಮಳೆಗೆ ಯಮುನಾ ನದಿ ಅಪಾಯ ಮಟ್ಟ ಮೀರಿ ಸುರಿಯುತ್ತಿದ್ದು, ತಗ್ಗು ಪ್ರದೇಶಗಳಿಗೆ ಈಗಾಗಲೇ ನೀರು ನುಗ್ಗಿದೆ.
ದೆಹಲಿಯ ಎಲ್ಲಾ ಮುನ್ಸಿಪಲ್ ಕಾರ್ಪೋರೇಷನ್ ಶಾಲೆಗಳಿಗೆ ಜುಲೈ 16ರವರೆಗೆ ರಜೆ ಘೋಷಿಸಲಾಗಿದೆ. ರಸ್ತೆಗಳು ನದಿಗಳಾಗಿ ಮಾರ್ಪಟ್ಟಿದ್ದು, ಟ್ರಾಫಿಕ್ ಜಾಂ ಸಮಸ್ಯೆ ಉಂಟಾಗಿದೆ. ಹೆದ್ದಾರಿಯಲ್ಲಿ ಕಿಲೋಮೀಟರ್ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ಜನ ಹೈರಾಣಾಗಿದ್ದಾರೆ.
ಯಮುನಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದ್ದಂತೆಯೇ ದೆಹಲಿಯ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೂ ಜು.16ರವರೆಗೆ ರಜೆ ಘೋಷಿಸಲಾಗಿದೆ. ಐತಿಹಾಸಿಕ ಕೆಂಪು ಕೋಟೆಗೂ ನೀರು ನುಗ್ಗಿದ್ದು, ಇಂದು ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ. ಮುಂದಿನ ೨೪ ಗಂಟೆಯಲ್ಲಿ ಯಮುನೆಯ ನೀರಿನ ,ಮಟ್ಟ ಕಡಿಮೆಯಾಗುವ ಸಾಧ್ಯತೆ ಇದೆ. ಹಿಮಾಚಲದಲ್ಲಿಯೂ ಮಳೆ ಸುರಿಯುತ್ತಿದ್ದು, ಮನಾಲಿಯಲ್ಲಿ ಕಟ್ಟಡಗಳು ಕುಸಿದಿವೆ.