ಕರಾವಳಿ ಜಿಲ್ಲೆಗಳಲ್ಲಿ ಮುಂದುವರಿದ ಮಳೆ: ಆತಂಕ ಸೃಷ್ಟಿಸಿದ ಕಡಲ್ಕೊರೆತ

ಹೊಸದಿಗಂತ ವರದಿ ಮಂಗಳೂರು: 

ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕಳೆದ ಒಂದು ವಾರದಿಂದ ಧಾರಾಕಾರವಾಗಿ ಮಳೆಯಾಗುತ್ತಿದ್ದು, ಶನಿವಾರವೂ ಎಂದಿನಂತೆ ಸುರಿದಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ, ಕಾಸರಗೋಡು ಮತ್ತು ಕೊಡಗು ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು ಅಲ್ಲಲ್ಲಿ ಗುಡ್ಡ ಕುಸಿತ, ಮನೆಗೆ ಹಾನಿ, ರಸ್ತೆ ಕುಸಿತ ಸೇರಿದಂತೆ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಲೇ ಇವೆ. ಉಳ್ಳಾಲ, ಸೋಮೇಶ್ವರ ಕಡಲ ತೀರದಲ್ಲಿ ಕಡಲಬ್ಬರ ಜೋರಾಗಿದ್ದು, ಕಡಲ್ಕೊರೆತದಿಂದ ಸಮುದ್ರ ತೀರದ ನಿವಾಸಿಗಳು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುವಂತಾಗಿದೆ.

 

ಭಾರೀ ಮಳೆಯ ಹಿನ್ನೆಲೆಯಲ್ಲಿ ಶನಿವಾರದವರೆಗೆ ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ದ.ಕ, ಉಡುಪಿ ಮತ್ತು ಕೊಡಗಿನಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮಂಗಳೂರು ನಗರ ಸೇರಿದಂತೆ ದ.ಕ ಜಿಲ್ಲೆಯಲ್ಲಿ ಬೆಳಗ್ಗಿನಿಂದಲೇ ಮಳೆಯಾಗುತ್ತಿದ್ದು, ಮಲೆನಾಡಿನ ವಾತಾವರಣ ಸೃಷ್ಟಿಸಿದೆ.

ಬಂಟ್ವಾಳದಲ್ಲಿ ನೇತ್ರಾವತಿ ನದಿ 7.5 ಮೀಟರ್ ಎತ್ತರದಲ್ಲಿ ಹರಿಯುತ್ತಿದೆ. ಇಲ್ಲಿ ಅಪಾಯದ ಮಟ್ಟ 8.5 ಮೀಟರ್ ಆಗಿದ್ದು,  ಹೊಸ ಡ್ಯಾಂನ ಎಲ್ಲ ಗೇಟ್‌ಗಳಿಂದ ರಭಸವಾಗಿ ನೀರು ಹರಿಯುತ್ತಿದೆ. ತೀರದ ನಿವಾಸಿಗಳಿಗೆ ಎಚ್ಚರದಿಂದ ಇರುವಂತೆ ಕಂದಾಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಮಂಗಳೂರು ವ್ಯಾಪ್ತಿಯ ಅಡ್ಯಾರು, ಪಾವೂರು ನದಿ ಪಾತ್ರದ ಜನತೆ ಆತಂಕದಿಂದ ದಿನಕಳೆಯುವಂತಾಗಿದೆ. ಈಗಾಗಲೇ ಐದು ಮನೆಗಳು ನೆರೆ ನೀರಿಗೆ ಮುಳುಗಡೆಯಾಗಿದೆ. ಈ ಭಾಗದಲ್ಲಿ ಇನ್ನಷ್ಟು ಮನೆಗಳಿಗೆ ನೀರು ನುಗ್ಗುವ ಅಪಾಯ ಎದುರಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!