ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಹೊಲಗದ್ದೆಗಳಲ್ಲಿನ ರೈತರ ಮನೆಗಳಿಗೆ ನಿರಂತರ ವಿದ್ಯುತ್ ಸರಬರಾಜು ಮಾಡಲು ಯೋಜಿಸಲಾಗಿದೆ ಎಂದು ಇಂಧನ ಸಚಿವ ಕೆಜೆ ಜಾರ್ಜ್ ಬುಧವಾರ ಹೇಳಿದರು.
ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಪ್ರವಾಹ ಪೀಡಿತ ಕುಟುಂಬಗಳು ತಮ್ಮ ಹೊಲಗಳಲ್ಲಿ ಮನೆ ನಿರ್ಮಿಸಿಕೊಂಡು ವಾಸವಿದ್ದು, ಈ ಮನೆಗಳಿಗೆ ನಿರಂತರ ವಿದ್ಯುತ್ ನೀಡುವುದು ಅಗತ್ಯವಾಗಿದೆ. ಈ ಸಮಸ್ಯೆಯನ್ನು ಬಗೆಹರಿಸುವುದು ಮತ್ತು ಅಗತ್ಯ ಕ್ರಮಕೈಗೊಳ್ಳಲಾಗುವುದು’ ಎಂದು ಹೇಳಿದರು.
ಸದ್ಯ ಫಾರ್ಮ್‌ಹೌಸ್‌ಗಳಿಗೆ ಏಳು ಗಂಟೆಗಳ ತ್ರಿಫೇಸ್ ವಿದ್ಯುತ್ ಸಿಗುತ್ತಿದೆ. ದಿನದ ಉಳಿದ ಅವಧಿಯಲ್ಲಿ ಸಂಜೆ 6 ರಿಂದ ಬೆಳಿಗ್ಗೆ 6 ರವರೆಗೆ ಸಿಂಗಲ್ ಫೇಸ್ ಓಪನ್ ಡೆಲ್ಟಾ ಮಾದರಿಯಲ್ಲಿ ವಿದ್ಯುತ್ ನೀಡಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಕಳೆದ ವರ್ಷದ ಬೇಸಿಗೆಯಲ್ಲಿ ಒಂದು ತಿಂಗಳು ಮಾತ್ರ ವಿದ್ಯುತ್ ಸಮಸ್ಯೆ ಎದುರಾಗಿತ್ತು. ಆದರೆ, ಜನರಿಗೆ ಹಾಗೂ ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಯಿತು. ಪಂಜಾಬ್ ಹಾಗೂ ಉತ್ತರ ಪ್ರದೇಶಗಳ ಜತೆ ವಿದ್ಯುತ್ ವಿನಿಮಯ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಮುಂಬರುವ ಬೇಸಿಗೆಯಲ್ಲೂ ಜನರಿಗೆ ವಿದ್ಯುತ್ ಪೂರೈಸಲು ಇಲಾಖೆ ಸನ್ನದ್ದವಾಗಿದೆ ಎಂದರು.