April 12, 2026
Sunday, April 12, 2026
spot_img

ಪಶ್ಚಿಮ ಏಷ್ಯಾ ಸಂಘರ್ಷ ಮೇಲೆ ನಿರಂತರ ನಿಗಾ, ಭಾರತೀಯರ ಸುರಕ್ಷತೆ ಕೇಂದ್ರದ ಆದ್ಯತೆ: ರಣದೀಪ್ ಜೈಸ್ವಾಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಸಂಘರ್ಷ ಹಿನ್ನೆಲೆಯಲ್ಲಿ ಸಮಸ್ಯೆಗಳನ್ನು ಮಾತುಕತೆ ಮೂಲಕ ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣದೀಪ್ ಜೈಸ್ವಾಲ್ ದೆಹಲಿಯಲ್ಲಿಂದು ಹೇಳಿದ್ದಾರೆ.

ಅಂತರ್ ಸಚಿವಾಲಯಗಳ ಸುದ್ದಿಗೋಷ್ಠಿಯಲ್ಲಿ ಅವರು, ಕಚ್ಚಾತೈಲ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಎದುರಾಗದಂತೆ ಪರಿಶೀಲನೆ ನಡೆಸಲಾಗುತ್ತಿದೆ. ಸಂಘರ್ಷ ಬಾಧಿತ ಎಲ್ಲಾ ಭಾಗಗಳಲ್ಲೂ ಭಾರತೀಯರ ಸುರಕ್ಷತೆ ಕೇಂದ್ರದ ಆದ್ಯತೆಯಾಗಿದೆ ಎಂದು ಹೇಳಿದರು.

ಕೇಂದ್ರ ಹಡಗು ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿನ್ಹಾ, ಪರ್ಷಿಯನ್ ಕೊಲ್ಲಿ ಪ್ರದೇಶದಲ್ಲಿರುವ ಎಲ್ಲಾ ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ. ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ ಧ್ವಜ ಹೊತ್ತ 24 ಹಡಗುಗಳಿದ್ದು , ಅದರಲ್ಲಿ ಶಿವಾಲಿಕ್ ಮತ್ತು ನಂದಾ ದೇವಿ ಎಂಬ ಹಡಗುಗಳು 92 ಸಾವಿರದ 700 ಮೆಟ್ರಿಕ್ ಟನ್ ಎಲ್ ಪಿಜಿ ಹೊತ್ತಿದ್ದು, ಇಂದು ಮುಂಜಾನೆ ಭಾರತದತ್ತ ಹೊರಟಿವೆ. ಎರಡೂ ಹಡಗುಗಳು ಮಾರ್ಚ್ 16 ಅಥವಾ 17 ರಂದು ಭಾರತದ ಬಂದರು ತಲುಪಲಿವೆ ಎಂದು ತಿಳಿಸಿದರು.


ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ , ದೇಶದಲ್ಲಿ ಸಾಕಷ್ಟು ತೈಲ ದಾಸ್ತಾನಿದ್ದು , ಯಾವುದೇ ಚಿಲ್ಲರೆ ಮಾರಾಟ ಮಳಿಗೆ ಅಥವಾ ಎಲ್‌ಪಿಜಿ ವಿತರಕರಲ್ಲಿ ಗ್ಯಾಸ್ ಕೊರತೆಯಿಲ್ಲ. ಪಿಎನ್‌ಜಿ ಮತ್ತು ಸಿಎನ್‌ಜಿ ಗ್ರಾಹಕರಿಗೆ ಶೇಕಡಾ 100 ರಷ್ಟು ಅನಿಲ ಪೂರೈಕೆಯಾಗುತ್ತಿದೆ. ಇತರ ಅಗತ್ಯ ಸೇವೆಗಳಲ್ಲೂ ಯಾವುದೇ ವ್ಯತ್ಯಾಸವಿಲ್ಲ ಎಂದರು.

IVRS, SMS, ವಾಟ್ಸಾಪ್ ಬುಕಿಂಗ್ ಅಥವಾ ಮೊಬೈಲ್ ಅಪ್ಲಿಕೇಶನ್‌ಗಳಂತಹ ಡಿಜಿಟಲ್ ವಿಧಾನಗಳ ಮೂಲಕ ಸಿಲಿಂಡರ್ ಮರುಪೂರಣ ಬುಕ್ ಮಾಡುವಂತೆ ಮನವಿ ಮಾಡಿದರು.

ಗಲ್ಫ್ ರಾಷ್ಟ್ರಗಳ ಹೆಚ್ಚುವರಿ ಕಾರ್ಯದರ್ಶಿ ಆರ್. ಮಹಾಜನ್, ಭಾರತೀಯ ವಿದೇಶಾಂಗ ಸಚಿವಾಲಯ ಪಶ್ಚಿಮ ಏಷ್ಯಾ ಮತ್ತು ಗಲ್ಫ್ ಪ್ರದೇಶದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು ದಿನದ 24 ಗಂಟೆಯೂ ಸಹಾಯವಾಣಿಗಳನ್ನು ತೆರೆಯಲಾಗಿದೆ ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !