March 16, 2026
Monday, March 16, 2026
spot_img

ಉಡುಪಿಯಲ್ಲಿ ಮತಾಂತರದ ಸಂಚು: ‘ಸಮಾಧಾನ ಮಹೋತ್ಸವ’ಕ್ಕೆ ತಡೆ ನೀಡಲು ಹಿಂಜಾವೇ ಆಗ್ರಹ

ಹೊಸದಿಗಂತ ಉಡುಪಿ:

ನಗರದ ಮಿಷನ್ ಕಂಪೌಂಡ್ ಮೈದಾನದಲ್ಲಿ ಮಾರ್ಚ್ 20 ರಿಂದ 22 ರವರೆಗೆ ಆಯೋಜಿಸಲಾಗಿರುವ ‘ಸಮಾಧಾನ ಮಹೋತ್ಸವ’ ಕಾರ್ಯಕ್ರಮವು ಕೇವಲ ಮತಾಂತರದ ಪಿತೂರಿಯಾಗಿದ್ದು, ಜಿಲ್ಲಾಡಳಿತವು ಈ ಕೂಡಲೇ ಇದರ ಅನುಮತಿಯನ್ನು ರದ್ದುಗೊಳಿಸಬೇಕು ಎಂದು ಹಿಂದು ಜಾಗರಣ ವೇದಿಕೆಯ ಮುಖಂಡ ಶ್ರೀಕಾಂತ್ ಶೆಟ್ಟಿ ಆಗ್ರಹಿಸಿದ್ದಾರೆ.


​ಸೋಮವಾರ ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಿಳುನಾಡಿನ ಮತಾಂತರವಾದಿ ಮೋಹನ್ ಸಿ. ಲಾಝರಸ್ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಈ ವ್ಯಕ್ತಿಯು ಈ ಹಿಂದೆ ಹಿಂದು ದೇವಾಲಯಗಳನ್ನು “ಸೈತಾನನ ಗುಡಿಗಳು” ಎಂದು ಕರೆದು ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಇತಿಹಾಸ ಹೊಂದಿದ್ದಾರೆ. ಇದೇ ಕಾರಣಕ್ಕಾಗಿ ತಮಿಳುನಾಡಿನ ವಿವಿಧ ಜಿಲ್ಲೆಗಳಲ್ಲಿ ಇವರ ಮೇಲೆ ದ್ವೇಷಪೂರಿತ ಭಾಷಣಕ್ಕೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ 153A ಮತ್ತು 295A ಅಡಿಯಲ್ಲಿ ಎಫ್‌ಐಆರ್ ದಾಖಲಾಗಿವೆ ಎಂಬುದನ್ನು ವಿವರಿಸಿದರು.


​ಈ ಕಾರ್ಯಕ್ರಮದ ಹಿಂದೆ ಅವೈಜ್ಞಾನಿಕ ಮೌಢ್ಯಗಳ ಪ್ರದರ್ಶನವಿದೆ ಎಂದು ದೂರಿದ ಅವರು, ಕೇವಲ ಒಂದು ಚಿಟಿಕೆ ಹೊಡೆದರೆ ಸಾಕು ಲಿವರ್ ಸಮಸ್ಯೆ ಗುಣಪಡಿಸುತ್ತೇವೆ ಅಥವಾ ಕಿಡ್ನಿ ಕಲ್ಲುಗಳನ್ನು ಹೊರತೆಗೆಯುತ್ತೇವೆ ಎಂಬ ಹಸಿ ಸುಳ್ಳುಗಳನ್ನು ಹೇಳಿ ಜನರನ್ನು ವಂಚಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹೀಗೆ ರೋಗ ವಾಸಿ ಮಾಡುವ ಆಮಿಷವೊಡ್ಡಿ ಅಮಾಯಕ ಜನರನ್ನು ಮತಾಂತರದ ಜಾಲಕ್ಕೆ ಎಳೆಯುವುದು ಇವರ ಮುಖ್ಯ ಉದ್ದೇಶವಾಗಿದೆ ಎಂದು ಅವರು ಆರೋಪಿಸಿದರು.


​ಇದಲ್ಲದೆ, ಈ ಕಾರ್ಯಕ್ರಮಕ್ಕೆ ಹಣಕಾಸಿನ ನೆರವು ನೀಡುತ್ತಿರುವ ‘ಜೀಸಸ್ ರಿಡೀಮ್ಸ್’ ಸಂಸ್ಥೆಯ ವಿದೇಶಿ ದೇಣಿಗೆ ಪರವಾನಗಿಯನ್ನು ಕೇಂದ್ರ ಗೃಹ ಸಚಿವಾಲಯವು ಅಮಾನತುಗೊಳಿಸಿದೆ. ವಿದೇಶಿ ಹಣವನ್ನು ದುರುಪಯೋಗಪಡಿಸಿಕೊಂಡು ಸಮಾಜದಲ್ಲಿ ಕೋಮು ಸೌಹಾರ್ದ ಕೆಡಿಸುವ ಕೆಲಸಕ್ಕೆ ಬಳಸಲಾಗುತ್ತಿದೆ ಎಂಬುದು ಈ ಮೂಲಕ ಸಾಬೀತಾಗಿದೆ ಎಂದು ಅವರು ಪ್ರತಿಪಾದಿಸಿದರು.


​ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ ಅವರು, ಉಡುಪಿ ಜಿಲ್ಲೆಯ ಶಾಂತಿಯುತ ವಾತಾವರಣವನ್ನು ಕೆಡಿಸಲು ಹೊರಗಿನಿಂದ ಬರುವ ಇಂತಹ ಶಕ್ತಿಗಳಿಗೆ ಅವಕಾಶ ನೀಡಬಾರದು. ಒಂದು ವೇಳೆ ಸಮಾಧಾನ ಮಹೋತ್ಸವಕ್ಕೆ ತಡೆ ನೀಡದಿದ್ದರೆ ಜಿಲ್ಲೆಯಾದ್ಯಂತ ತೀವ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು ಮತ್ತು ಮುಂದಾಗುವ ಅನಾಹುತಗಳಿಗೆ ಜಿಲ್ಲಾಡಳಿತವೇ ನೇರ ಹೊಣೆಯಾಗಲಿದೆ ಎಂದು ಅವರು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಹಿಂದೂ ಜಾಗರಣಾ ವೇದಿಕೆಯ ಪ್ರಮುಖರಾದ ರಾಜೇಶ್ ಉಚ್ಚಿಲ, ರತ್ನಾಕರ ಅಮೀನ್, ಗುರುಪ್ರಸಾದ್ ನಾರಾವಿ, ನಗರಸಭೆ ಸದಸ್ಯ ವಿಜಯ್ ಕೊಡವೂರು ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !