ಉಡುಪಿ:
ಪೋಲಿಸ್ ಇಲಾಖೆ ಹಿಂದಿಗಿಂತ ಸುಧಾರಿಸಿದೆ. ಆಧುನಿಕ ತಂತ್ರಜ್ಞಾನದೊಂದಿಗೆ ಅಪರಾಧ ಪತ್ತೆಗೆ ತರಬೇತಿ ಹೊಂದಿದ ಅಧಿಕಾರಿ ಮತ್ತು ಸಿಬ್ಬಂದಿಗಳಿದ್ದಾರೆ. ಸಾರ್ವಜನಿಕರು ಕಾನೂನು ಪಾಲನೆಯ ಜೊತೆಗೆ ಪೋಲಿಸರ ಕರ್ತವ್ಯಕ್ಕೆ ಸಹಕಾರ ನೀಡಬೇಕೆಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ್ ಶಿವಪ್ಪ ಅಭಿಪ್ರಾಯಪಟ್ಟರು.
ಅವರು ಶನಿವಾರ, ನಗರದ ಚಂದು ಮೈದಾನದಲ್ಲಿ ಪೋಲಿಸ್ ಹುತಾತ್ಮರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ಗಡಿ ಕಾಯುವ ಯೋಧರ ಸಮಸ್ಯೆಗಳ ಬಗ್ಗೆ ಮಾತನಾಡುವ ನಾವು, ಹತ್ತಿರದಲ್ಲೇ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಶ್ರಮ ವಹಿಸುವಾಗ ಪೋಲಿಸರು ಎದುರಿಸುವ ಸಮಸ್ಯೆಗಳ ಬಗ್ಗೆ ಗಮನ ಹರಿಸುವುದಿಲ್ಲ. ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾದಗ ಸಿಂಪತಿ ತೋರಿಸಿ, ನಂತರ ಮರೆಯುತ್ತಾರೆ. ಜನರು ಪೋಲಿಸರ ಕರ್ತವ್ಯವನ್ನು ಗೌರವಿಸುವುದರ ಜೊತೆಗೆ ಕಾನೂನು ಪಾಲನೆ ಮಾಡಬೇಕು. ಪೋಲಿಸರು ಕರ್ತವ್ಯದ ವೇಳೆ ಮರಣ ಹೊಂದುವ ಸಂಖ್ಯೆಗಳು ಕಡಿಮೆಯಾಗಲಿ ಎಂದು ಹಾರೈಸಿದರು.
ವೇದಿಕೆಯಲ್ಲಿ ಸಿಐಡಿ ಐಜಿಪಿ ಪ್ರವೀಣ್ ಮಧುಕರ್ ಪವಾರ್, ಜಿಲ್ಲಾಧಿಕಾರಿ ಡಾ| ವಿದ್ಯಾಕುಮಾರಿ, ಉಡುಪಿ ಜಿ.ಪಂ ಸಿಇಓ ಪ್ರಸನ್ನ ಹೆಚ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಉದಯ್.ಎಮ್.ನಾಯಕ್, ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ| ಅರುಣ್.ಕೆ, ಹೆಚ್ಚುವರಿ ಎಸ್ಪಿ ಎಸ್.ಟಿ ಸಿದ್ದಲಿಂಗಪ್ಪ ಉಪಸ್ಥಿತರಿದ್ದರು.
ಉಡುಪಿ ಡಿವೈಎಸ್ಪಿ ದಿನಕರ್.ಪಿ.ಕೆ ಸಶಸ್ತ್ರ ತಂಡ ಮುಂದಾಳತ್ವವನ್ನು ವಹಿಸಿ, ಕವಾಯತು ಪ್ರದರ್ಶಿಸಿದರು.