ಕಾಪಿ ವಿವಾದ: ಯುಟ್ಯೂಬ್ ನಿಂದ ಕಾಂತಾರದ ವರಾಹ ರೂಪಂ ಹಾಡು ಡಿಲಿಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂತಾರ ಸಿನಿಮಾ ಎಲ್ಲಡೆ ಉತ್ತಮ ಪ್ರದರ್ಶನ ಕಾಣುತ್ತಿದ್ದು , ಕನ್ನಡ ಮಾತ್ರವಲ್ಲದೇ ತೆಲುಗು ಹಾಗೂ ಹಿಂದಿ ಭಾಷೆಯ ಸಿನಿ ಪ್ರೇಕ್ಷಕರಿಂದಲೂ ಮೆಚ್ಚುಗೆ ಗಳಿಸಿದೆ.

ಇದರ ನಡುವೆ ಕಾಂತಾರ ಚಿತ್ರಕ್ಕೆ ತೈಕ್ಕುಡಂ ಬ್ರಿಡ್ಜ್ ಎಂಬ ಬ್ಯಾಂಡ್ ಕಂಪನಿ ನಮ್ಮ ಹಾಡನ್ನು ಚಿತ್ರದಲ್ಲಿ ಕಾಪಿ ಮಾಡಲಾಗಿದೆ ಎಂದು ಕೇಸನ್ನು ದಾಖಲಿಸಿತ್ತು. ಪರಿಣಾಮವಾಗಿ ಕೇರಳದ ಸ್ಥಳೀಯ ನ್ಯಾಯಾಲಯ ಕಾಂತಾರ ಚಿತ್ರದಲ್ಲಿ ವರಾಹ ರೂಪಂ ಹಾಡನ್ನು ಪ್ರಸಾರ ಮಾಡುವಂತಿಲ್ಲ ಎಂದು ನೋಟಿಸ್ ನೀಡಿತ್ತು.

ಇಷ್ಟೆಲ್ಲಾ ಆದರೂ ಹೊಂಬಾಳೆ ಫಿಲ್ಮ್ಸ್ ಈ ವರಾಹ ರೂಪಂ ಹಾಡನ್ನು ತೆಗೆದು ಹಾಕಿರಲಿಲ್ಲ, ಆದರೆ ಇದೀಗ ನಿನ್ನೆಯಿಂದ ( ನವೆಂಬರ್ 11) ವರಾಹ ರೂಪಂ ಹಾಡು ಹೊಂಬಾಳೆ ಫಿಲ್ಮ್ಸ್ ಯುಟ್ಯೂಬ್ ಚಾನೆಲ್‌ನಿಂದ ಕಾಣೆಯಾಗಿದೆ. ಇನ್ನು ಮಾತೃಭೂಮಿ ಕಪ್ಪ ಟಿವಿ ಚಾನೆಲ್ ಮಾಡಿದ ಕಾಪಿ ರೈಟ್ ಕ್ಲೈಮ್ ಕಾರಣದಿಂದ ಹಾಡನ್ನು ತೆಗೆದು ಹಾಕಲಾಗಿದೆ ಎಂದು ಯುಟ್ಯೂಬ್ ತೋರಿಸುತ್ತಿದೆ.

ಇನ್ನು ವರಾಹ ರೂಪಂ ಹಾಡು ಯುಟ್ಯೂಬ್‌ನಿಂದ ಮಾತ್ರ ಡಿಲಿಟ್ ಆಗಿದೆ. ಇನ್ನುಳಿದಂತೆ ಆಡಿಯೊ ಅಪ್ಲಿಕೇಶನ್‌ಗಳಾದ ಸ್ಪಾಟಿಫೈ, ಅಮೆಜಾನ್ ಮ್ಯೂಸಿಕ್, ವಿಂಕ್ ಮ್ಯೂಸಿಕ್, ಜಿಯೊ ಸಾವ್ನ್‌ನಲ್ಲಿ ವರಾಹ ರೂಪಂ ಹಾಡು ಸದ್ಯಕ್ಕೆ ಲಭ್ಯವಿದೆ. ಅಷ್ಟೇ ಅಲ್ಲದೇ ಚಿತ್ರಮಂದಿರಗಳಲ್ಲಿಯೂ ಚಿತ್ರದಲ್ಲಿ ಹಾಡನ್ನು ಪ್ರಸಾರ ಮಾಡಲಾಗುತ್ತಿದೆ.

ಸದ್ಯ ಹೊಂಬಾಳೆ ಫಿಲ್ಮ್ಸ್ ಯುಟ್ಯೂಬ್ ಚಾನೆಲ್‌ನಿಂದ ವರಾಹ ರೂಪಂ ಹಾಡು ಕಾಣೆಯಾಗಿರುವುದರ ಕುರಿತು ನೆಟ್ಟಿಗರು ಮಾತನಾಡಿದ್ದು, ಈ ಹಾಡಿಗೂ ನವರಸಮ್ ಹಾಡಿಗೂ ಸಾಕಷ್ಟು ವ್ಯತ್ಯಾಸಗಳಿವೆ ಎಂದು ಕಾಂತಾರ ಚಿತ್ರದ ಬಗ್ಗೆ ಬ್ಯಾಟ್ ಬೀಸಿದ್ದಾರೆ.

ವರಾಹ ರೂಪಂ ಹಾಡಿನ ಮೇಲೆ ಕೃತಿಚೌರ್ಯ ದೂರನ್ನು ದಾಖಲಿಸಿದ ನಂತರ ಮಾತನಾಡಿದ್ದ ತೈಕ್ಕುಡಂ ಬ್ಯಾಂಡ್‌ನ ಸದಸ್ಯ ವಿಯಾನ್ ಫೆರ್ನಾಂಡಿಸ್ ಹಣ ಪಡೆಯುವ ಉದ್ದೇಶದಿಂದ ನಾವು ಕೇಸ್ ಹಾಕಲಿಲ್ಲ, ಈಗಲೂ ಸಹ ಚಿತ್ರತಂಡ ನಮಗೆ ಕ್ರೆಡಿಟ್ ನೀಡಿ ಹಾಡನ್ನು ಉಪಯೋಗಿಸಿದರೆ ನಮ್ಮ ಯಾವುದೇ ಅಭ್ಯಂತರವೂ ಇಲ್ಲ, ಈಗ ಹೊಂಬಾಳೆ ಫಿಲ್ಮ್ಸ್ ಯಾವ ನಡೆ ಇಡುತ್ತೆ ಎಂಬುದು ಮುಖ್ಯ ಎಂದು ಹೇಳಿಕೆ ನೀಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!