ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಸದ್ದೇ ಇಲ್ಲದಂತೆ ಕೊರೋನಾ ಸಂಖ್ಯೆ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಳ ಮಾಡುವಂತೆ ಸರ್ಕಾರ ಆದೇಶ ನೀಡಿದೆ.
ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ದೈನಂದಿನ ಕೋವಿಡ್ ಪರೀಕ್ಷೆಗಳ ಗುರಿಯನ್ನು ೨೦ ಸಾವಿರಕ್ಕೆ ಹೆಚ್ಚಿಸಲಾಗಿದೆ. ಮನೆ ಹಾಗೂ ಕಚೇರಿಗಳಲ್ಲಿ ಸೋಂಕಿತರ ಪ್ರಾಥಮಿಕ ಸಂಪರ್ಕಿತರಿಗೆ ಕಡ್ಡಾಯವಾಗಿ ಪರೀಕ್ಷೆ ನಡೆಸುವಂತೆ ಸೂಚನೆ ನೀಡಲಾಗಿದೆ.
ಜ್ವರ, ಶೀತ, ಅನಾರೋಗ್ಯ, ಉಸಿರಾಟದ ತೊಂದರೆ ಹೀಗೆ ಯಾವುದೇ ಸಮಸ್ಯೆಗಳಿಂದ ಬಳಲುತ್ತಿರುವರಿಗೆ ಕೋವಿಡ್ ಪರೀಕ್ಷೆ ಮಾಡಬೇಕು. ಜತೆಗೆ ರೋಗ ಲಕ್ಷಣವುಳ್ಳ ಅಂತಾರಾಜ್ಯ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಪರೀಕ್ಷೆಗೆ ಒಳಪಡಿಸಬೇಕು ಎಂದು ತಿಳಿಸಲಾಗಿದೆ.
ನಿಗದಿಪಡಿಸಲಾದ ಕೋವಿಡ್ ಪರೀಕ್ಷೆಯಲ್ಲಿ ಶೇ.70ರಷ್ಟು ಪರೀಕ್ಷೆಯನ್ನು ಆರ್‌ಟಿಪಿಸಿಆರ್ ವಿಧಾನದ ಮೂಲಕ ಸರ್ಕಾರಿ ಪ್ರಯೋಗಾಲಯದಲ್ಲಿ ಹಾಗೂ ಶೇ.30ರಷ್ಟು ಪರೀಕ್ಷೆಗಳನ್ನು ರ‍್ಯಾಟ್ ಮಾಡರಿಯಲ್ಲಿ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.