ಹೊಸದಿಗಂತ ಬೆಳಗಾವಿ:
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಆಡಳಿತಾತ್ಮಕ ಬಿಕ್ಕಟ್ಟಿದೆ ಎಂಬ ಕಾರಣ ನೀಡಿ, ಪಾಲಿಕೆಯನ್ನು ಸೂಪರ್ಸೀಡ್ (ರದ್ದು) ಮಾಡಲು ಸರ್ಕಾರಕ್ಕೆ ಶಿಫಾರಸು ಕಳುಹಿಸಿರುವ ಪ್ರಾದೇಶಿಕ ಆಯುಕ್ತರ ಪ್ರಸ್ತಾವನೆಗೆ ಮೇಯರ್ ಪ್ರೀತಿ ವಿನಾಯಕ ಕಾಮಕರ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸೋಮವಾರ ಪ್ರಾದೇಶಿಕ ಆಯುಕ್ತರ ಕಚೇರಿಗೆ ಭೇಟಿ ನೀಡಿದ ಅವರು, ಪಾಲಿಕೆಯು ನಗರದ ಸರ್ವಾಂಗೀಣ ಅಭಿವೃದ್ಧಿಗೆ ಸಂಪೂರ್ಣ ಬದ್ಧತೆಯಿಂದ ಕೆಲಸ ಮಾಡುತ್ತಿದೆ ಎಂದು ಸ್ಪಷ್ಟಪಡಿಸಿದರು.
ಐದು ತಿಂಗಳಲ್ಲಿ 18 ಯಶಸ್ವಿ ಸಭೆಗಳು: ವಿಕಾಸದತ್ತ ಪಾಲಿಕೆ ಹೆಜ್ಜೆ
ಪಾಲಿಕೆಯಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿಲ್ಲ ಎಂದು ತಿಳಿಸಿದ ಮೇಯರ್, ಕಳೆದ ಐದು ತಿಂಗಳ ಅವಧಿಯಲ್ಲಿ ಪರಿಷತ್ ಹಾಗೂ ವಿವಿಧ ಸ್ಥಾಯಿ ಸಮಿತಿಗಳ ಒಟ್ಟು 18 ಸಭೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದರು. ತೆರಿಗೆ ನಿರ್ಧರಣೆ, ಸಾರ್ವಜನಿಕ ಆರೋಗ್ಯ, ಶಿಕ್ಷಣ, ಸಾಮಾಜಿಕ ನ್ಯಾಯ, ನಗರ ಯೋಜನೆ ಹಾಗೂ ಲೆಕ್ಕಗಳ ಸ್ಥಾಯಿ ಸಮಿತಿಗಳು ನಿರಂತರವಾಗಿ ಸಭೆ ನಡೆಸಿ, ಸಾರ್ವಜನಿಕರ ಹಿತದೃಷ್ಟಿಯಿಂದ ಸಾಲು ಸಾಲು ಅಭಿವೃದ್ಧಿಪರ ನಿರ್ಣಯಗಳನ್ನು ಕೈಗೊಂಡಿವೆ ಎಂದು ಮಾಹಿತಿ ಕೊಟ್ಟರು.

ಕನ್ನಡಪರ ಹಾಗೂ ಶಾಸನಬದ್ಧ ನಿರ್ಧಾರಗಳಿಗೆ ಆದ್ಯತೆ
ಕನ್ನಡಪರ ಸಂಘಟನೆಗಳ ಕ್ರಿಯಾ ಸಮಿತಿಯ ಮನವಿಗೆ ಗೌರವ ನೀಡಿ, ಗೊತ್ತುವಳಿ ಸಂಖ್ಯೆ 358ಕ್ಕೆ ಸಂಬಂಧಿಸಿದಂತೆ ಆಗಸ್ಟ್ 18ರ ಸಭೆಯಲ್ಲಿ ಅಗತ್ಯ ತಿದ್ದುಪಡಿ ತರಲಾಗಿದೆ. ಗಡಿ ವಿವಾದ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಯಲ್ಲಿರುವುದರಿಂದ, ಸೂಕ್ತ ಕಾನೂನು ಸಲಹೆ ಮತ್ತು ನಗರಾಭಿವೃದ್ಧಿ ಇಲಾಖೆಯ ಸ್ಪಷ್ಟ ಮಾರ್ಗದರ್ಶನ ಪಡೆಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಿ, ನಿಯಮಾನುಸಾರವೇ ಹೆಜ್ಜೆ ಇಡಲಾಗಿದೆ ಎಂದು ಅವರು ವಿವರಿಸಿದರು.
ಸರ್ಕಾರದ ಕಾರ್ಯಗಳ ನಡುವೆಯೂ ಸಾರ್ವಜನಿಕ ಸೇವೆಗೆ ಶ್ರಮ
ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಜನಗಣತಿ, ಜಾತಿ ಪ್ರಮಾಣಪತ್ರ ವಿತರಣೆ ಹಾಗೂ ಎಸ್ಐಆರ್ನಂತಹ ಸರ್ಕಾರದ ಪ್ರಮುಖ ತುರ್ತು ಕರ್ತವ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಈ ಹೆಚ್ಚುವರಿ ಜವಾಬ್ದಾರಿಗಳಿಂದಾಗಿ ಸಿಬ್ಬಂದಿಯ ಅಭಾವ ಎದುರಾಗುತ್ತಿದೆಯೇ ಹೊರತು, ಇದು ಆಡಳಿತಾತ್ಮಕ ವೈಫಲ್ಯವಲ್ಲ. ಕರ್ತವ್ಯ ಲೋಪ ಎಸಗುವವರ ವಿರುದ್ಧ ಕ್ರಮ ಕೈಗೊಳ್ಳಲು ಪಾಲಿಕೆಯೇ ಇಲಾಖೆಗೆ ಪತ್ರ ಬರೆದು ಶಿಸ್ತಿನ ಆಡಳಿತಕ್ಕೆ ಆದ್ಯತೆ ನೀಡಿದೆ.
ಮರುಪರಿಶೀಲನೆಗೆ ಮನವಿ
ಸಿಬ್ಬಂದಿ ಅಭಾವದ ನಡುವೆಯೂ ನಾಗರಿಕ ಸೇವೆಗಳಿಗೆ ಧಕ್ಕೆಯಾಗದಂತೆ ಪಾಲಿಕೆ ಶ್ರಮಿಸುತ್ತಿದೆ. ಆದ್ದರಿಂದ ಸೂಪರ್ಸೀಡ್ ಮಾಡುವ ಪ್ರಸ್ತಾವನೆಯನ್ನು ಸರ್ಕಾರ ಹಿಂಪಡೆದು, ನಗರದ ಸುಗಮ ಆಡಳಿತ ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯ ಸಹಕಾರ ನೀಡಬೇಕೆಂದು ಮೇಯರ್ ಪ್ರೀತಿ ಕಾಮಕರ ಹಾಗೂ ಉಪಮೇಯರ್ ಅವರು ಪ್ರಾದೇಶಿಕ ಆಯುಕ್ತರ ಮೂಲಕ ರಾಜ್ಯ ಸರ್ಕಾರಕ್ಕೆ ಸಕಾರಾತ್ಮಕ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಪಾಲಿಕೆಯ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.



