September 5, 2026
Saturday, September 5, 2026
spot_img

ಪಡಿತರ ಅಕ್ಕಿ ಸಾಗಾಟದ ಲಾರಿಗೆ ಸ್ಕೂಟರ್ ಡಿಕ್ಕಿ: ಸಚಿವ ಯು.ಟಿ. ಖಾದರ್ ಸಂಬಂಧಿ ಸ್ಥಳದಲ್ಲೇ ಸಾವು

ಹೊಸದಿಗಂತ ಉಳ್ಳಾಲ:


ಮಂಗಳೂರು ನಗರದ ಹೊರವಲಯ ರಾ.ಹೆ.66 ರ ಜಪ್ಪಿನ ಮೊಗರು ಮಹಾಕಾಳಿ ಪಡ್ಪು ಕ್ರಾಸಲ್ಲಿ ಅಕ್ಕಿ ಸಾಗಾಟದ ಲಾರಿಗೆ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.


ಉಳ್ಳಾಲ ಸುಭಾಷ್ ನಗರ ಬಳಿಯ ಬಿರ್ಲಾ ಕಂಪೌಂಡ್ ನಿವಾಸಿ ಪಿ.ಎನ್. ಇಬ್ರಾಹಿಮ್ (70) ಮೃತ ಪಟ್ಟ ದುರ್ದೈವಿಯಾಗಿದ್ದಾರೆ.


ಇಬ್ರಾಹಿಮ್ ಅವರು ಸೋಮವಾರ ಮಧ್ಯಾಹ್ನ‌ ಸ್ಕೂಟರಲ್ಲಿ ಮಂಗಳೂರಿನಿಂದ ಮಂಗಳಾದೇವಿ ಒಳ ಮಾರ್ಗವಾಗಿ ಉಳ್ಳಾಲಕ್ಕೆ ಮರಳುತ್ತಿದ್ದ ವೇಳೆ ಜಪ್ಪಿನ ಮೊಗರು ಮಹಾಕಾಳಿ ಪಡ್ಪು ಕ್ರಾಸ್ ನಲ್ಲಿ ಹೆದ್ದಾರಿ ದಾಟುತ್ತಿದ್ದಾಗ ಹೆದ್ದಾರಿಯಲ್ಲಿ ಮಂಗಳೂರಿನಿಂದ ತೊಕ್ಕೊಟ್ಟು ಕಡೆಗೆ ಧಾವಿಸುತ್ತಿದ್ದ ಪಡಿತರ ಅಕ್ಕಿ ಸಾಗಾಟದ ಲಾರಿಯ ಇಂಧನ ಟ್ಯಾಂಕಿನ ಭಾಗದ ರಕ್ಷಣಾ ಸಲಾಕೆಗೆ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆನ್ನಲಾಗಿದೆ. ಮೂಲತ: ಪುತ್ತೂರು ನಿವಾಸಿಯಾಗಿರುವ ಇಬ್ರಾಹಿಮ್ ಅವರು ಈ ಹಿಂದೆ ವಿದೇಶದಲ್ಲಿದ್ದು, ಪ್ರಸ್ತುತ ಉಳ್ಳಾಲದ ಬಿರ್ಲಾ ಕಂಪೌಂಡಲ್ಲಿ ನೆಲೆಸಿದ್ದರೆನ್ನಲಾಗಿದೆ. ಇಬ್ರಾಹಿಮ್ ಅವರ ಏಕೈಕ ಪುತ್ರಿ ಬೆಂಗಳೂರಿನಲ್ಲಿ ನೆಲೆಸಿದ್ದಾರಂತೆ.


ಮೃತ ಇಬ್ರಾಹಿಮ್ ಅವರು ಆರೋಗ್ಯ ಸಚಿವ ಯು.ಟಿ ಖಾದರ್ ಅವರ ಸಹೋದರ ಇಫ್ತಿಕಾರ್ ಅಲಿ ಅವರ ಮಾವ (ಪತ್ನಿಯ ತಂದೆ)ನ ಸಹೋದರರಾಗಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !