Sunday, October 12, 2025

ಹಾಸನಾಂಬೆ ದರುಶನಕ್ಕೆ ಕ್ಷಣಗಣನೆ: ಪೂಜಾ ಸಿದ್ಧತೆ ಆರಂಭ, ಹೇಗಿದೆ ನೋಡಿ ಸಿದ್ಧತೆ!

ಹೊಸದಿಗಂತ ಹಾಸನ:

ಹಾಸನದ ಅಧಿದೇವತೆ ಹಾಸನಾಂಬೆ ದೇವಿಯ ದರ್ಶನಕ್ಕೆ ಕ್ಷಣಗಣನೆ ಆರಂಭವಾಗಿದೆ. ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ ಹಾಸನಾಂಬೆ ದೇವಿಯ ಗರ್ಭಗುಡಿ ಬಾಗಿಲನ್ನು ಇಂದು ಮಧ್ಯಾಹ್ನ 12 ಗಂಟೆಯ ನಂತರ ತೆರೆಯುವ ಸಿದ್ಧತೆಗಳು ಭರದಿಂದ ಸಾಗಿವೆ.

ದೇವಾಲಯಕ್ಕೆ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲು ಅರ್ಚಕರ ತಂಡವು ಆಗಮಿಸಿದೆ. ಪ್ರಧಾನ ಅರ್ಚಕ ನಾಗರಾಜ್ ಅವರ ನೇತೃತ್ವದಲ್ಲಿ ಅರ್ಚಕರು ಮಂಗಳ ವಾದ್ಯಗಳೊಂದಿಗೆ ಅಗತ್ಯವಾದ ಪೂಜಾ ಸಾಮಗ್ರಿಗಳನ್ನು ದೇಗುಲಕ್ಕೆ ತಂದಿದ್ದಾರೆ. ಈ ತಂಡವು ಗರ್ಭಗುಡಿ ತೆರೆಯುವ ಮೊದಲು ಬಾಗಿಲಿಗೆ ಮಾಡುವ ಪೂಜೆ ಹಾಗೂ ಗರ್ಭಗುಡಿ ತೆರೆದ ನಂತರ ದೇವಿಗೆ ಸಲ್ಲಿಸುವ ಪೂಜೆ-ಎರಡೂ ವಿಧಿಗಳಿಗಾಗಿ ಬೇಕಾದ ಪೂಜಾ ಸಾಮಾಗ್ರಿ, ಒಡವೆಗಳು ಮತ್ತು ದೇವಿಯ ಅಲಂಕಾರ ಸಾಮಾಗ್ರಿಗಳನ್ನು ಹೊತ್ತು ತಂದಿದೆ. ಮುತ್ತೈದೆಯರೂ ಪೂಜಾ ಸಾಮಗ್ರಿಗಳನ್ನು ಹಿಡಿದು ದೇಗುಲವನ್ನು ಪ್ರವೇಶಿಸಿದ್ದಾರೆ.

ಗರ್ಭಗುಡಿ ಬಾಗಿಲು ತೆರೆಯುವುದಕ್ಕೆ ಮುನ್ನ ಮೊದಲು ಬಾಗಿಲಿಗೆ ಪೂಜೆ ನೆರವೇರಿಸಲಾಗುತ್ತದೆ. ಇದರ ನಂತರ ಗರ್ಭಗುಡಿಯ ಬಾಗಿಲು ತೆರೆಯಲಾಗುತ್ತದೆ. ಬಾಗಿಲು ತೆರೆದ ಬಳಿಕ ಗರ್ಭಗುಡಿಯ ಒಳಗೆ ದೇವಿಗೆ ವಿಶೇಷ ಪೂಜೆಗಳು ಮತ್ತು ಅಲಂಕಾರ ಸೇವೆಗಳು ಆರಂಭವಾಗಲಿವೆ.
ಸಾವಿರಾರು ಭಕ್ತರು ಕಾತುರದಿಂದ ಕಾಯುತ್ತಿರುವ ಹಾಸನಾಂಬೆ ದೇವಿಯ ದರ್ಶನವು ಈ ವರ್ಷದ ಜಾತ್ರಾ ಮಹೋತ್ಸವದೊಂದಿಗೆ ಅಧಿಕೃತವಾಗಿ ಆರಂಭವಾಗಲಿದೆ.

error: Content is protected !!