April 15, 2026
Wednesday, April 15, 2026
spot_img

ಮೀಸಲಾತಿ ಕಿಡಿ, ಹೈಕೋರ್ಟ್‌ಗೆ ಬಾಂಬ್ ಬೆದರಿಕೆ: ಹುಸಿಯಾದ ‘ಆರ್‌ಡಿಎಕ್ಸ್’ ಅಬ್ಬರ!

ಹೊಸದಿಗಂತ ಧಾರವಾಡ:

ವಿದ್ಯಾಕಾಶಿ ಧಾರವಾಡದ ಹೈಕೋರ್ಟ್ ಪೀಠಕ್ಕೆ ಸೋಮವಾರ ಅನಾಮಧೇಯ ಇ-ಮೇಲ್ ಮೂಲಕ ಬಂದ ಬಾಂಬ್ ಬೆದರಿಕೆ ಸಂದೇಶವು ನ್ಯಾಯಾಂಗ ಆವರಣದಲ್ಲಿ ಕೆಲಕಾಲ ತೀವ್ರ ಆತಂಕ ಸೃಷ್ಟಿಸಿತ್ತು. ತಮಿಳುನಾಡಿನಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಈ ಬೆದರಿಕೆ ಹಾಕಲಾಗಿತ್ತು.

“ತಮಿಳುನಾಡಿನಲ್ಲಿ ಇಡಬ್ಲೂಎಸ್ ಮೀಸಲು ಜಾರಿ ನಿಲ್ಲಿಸಿ, ಇಲ್ಲದಿದ್ದರೆ ಮಧ್ಯಾಹ್ನ 1:15ಕ್ಕೆ ಹೈಕೋರ್ಟ್ ಆವರಣದಲ್ಲಿ ಆರ್‌ಡಿಎಕ್ಸ್ ಬಾಂಬ್ ಸ್ಫೋಟಿಸಲಾಗುವುದು” ಎಂಬ ಎಚ್ಚರಿಕೆಯ ಇ-ಮೇಲ್ ನ್ಯಾಯಾಲಯದ ಹೆಚ್ಚುವರಿ ರಿಜಿಸ್ಟ್ರಾರ್ ಶಾಂತವೀರ ಶಿವಪ್ಪ ಅವರಿಗೆ ಬಂದಿತ್ತು. ವಿಶೇಷವೆಂದರೆ, ಕಳೆದ ಜನವರಿ 6ರಂದು ಸಹ ಇದೇ ಮಾದರಿಯ ಬೆದರಿಕೆ ಸಂದೇಶ ಬಂದಿತ್ತು.

ಮಾಹಿತಿ ಸಿಗುತ್ತಿದ್ದಂತೆ ಎಚ್ಚೆತ್ತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಗುಂಜನ್ ಆರ್ಯ ಅವರು ಬಾಂಬ್ ನಿಷ್ಕ್ರಿಯ ದಳ, ಬೆರಳಚ್ಚು ತಜ್ಞರು ಮತ್ತು ಅಗ್ನಿಶಾಮಕ ದಳದೊಂದಿಗೆ ಸ್ಥಳಕ್ಕೆ ಧಾವಿಸಿದರು. ಮುಂಜಾಗ್ರತಾ ಕ್ರಮವಾಗಿ ನ್ಯಾಯಾಧೀಶರು ಮತ್ತು ನ್ಯಾಯವಾದಿಗಳನ್ನು ತಕ್ಷಣವೇ ಆವರಣದಿಂದ ಹೊರಕ್ಕೆ ಕಳುಹಿಸಿ, ಸುಮಾರು ಒಂದೂವರೆ ಗಂಟೆಗಳ ಕಾಲ ತೀವ್ರ ಶೋಧ ಕಾರ್ಯ ನಡೆಸಲಾಯಿತು.

ನ್ಯಾಯಾಲಯದ ಮೂಲೆ ಮೂಲೆಯನ್ನು ತಪಾಸಣೆ ನಡೆಸಿದ ನಂತರ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗದ ಕಾರಣ, ಇದೊಂದು ‘ಹುಸಿ ಬಾಂಬ್ ಬೆದರಿಕೆ’ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಈ ಸಂಬಂಧ ಸೈಬರ್ ಕ್ರೈಂ ಪೊಲೀಸರು ಇ-ಮೇಲ್ ಮೂಲದ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !