May 10, 2026
Sunday, May 10, 2026
spot_img

ಸಂತ ಸೇವಾಲಾಲರ ಕನಸು ನನಸಾಗಲಿ.. ಬಂಜಾರ ಯುವಶಕ್ತಿ ಮೇಲೆದ್ದರೆ ದೇಶಕ್ಕೇ ಶಕ್ತಿ!

ಹೊಸದಿಗಂತ ಬೆಳಗಾವಿ:

“ಸುಡುವ ಬಿಸಿಲನ್ನೂ ಲೆಕ್ಕಿಸದೆ ದುಡಿಯುವ ಬಂಜಾರ ಸಮುದಾಯದವರು ಸ್ವಾಭಿಮಾನದ ಸಂಕೇತ. ನಿಷ್ಠೆ, ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮಕ್ಕೆ ಬಂಜಾರ ಸಮಾಜವೇ ಸಾಕ್ಷಿ,” ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಣ್ಣಿಸಿದರು.

ನಗರದ ಕಲ್ಮೇಶ್ವರ ನಗರದ ಲಮಾಣಿ ತಾಂಡಾದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂತ ಶ್ರೀ ಸೇವಾಲಾಲ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಮಾಜದ ಯುವಜನತೆ ಕೇವಲ ದೈಹಿಕ ಶ್ರಮಕ್ಕೆ ಸೀಮಿತವಾಗದೆ, ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಗೆ ಬರಬೇಕು ಎಂಬುದು ತಮ್ಮ ಆಶಯವಾಗಿದೆ ಎಂದು ಅವರು ತಿಳಿಸಿದರು.

ಸಂತ ಸೇವಾಲಾಲ್ ಅವರು ಬಂಜಾರ ಸಮುದಾಯದ ಹಿತಕ್ಕಾಗಿ ಬ್ರಿಟಿಷರು ಮತ್ತು ಅಂದಿನ ರಾಜಮನೆತನಗಳ ವಿರುದ್ಧ ಧ್ವನಿ ಎತ್ತಿದ ಪವಾಡ ಪುರುಷರು. ಅವರ ಸಾಮಾಜಿಕ ಸುಧಾರಣೆಗಳಿಂದ ಪ್ರಭಾವಿತರಾಗಿಯೇ ಹೈದರಾಬಾದ್‌ನ ಒಂದು ಪ್ರದೇಶಕ್ಕೆ ‘ಬಂಜಾರ ಹಿಲ್ಸ್’ ಎಂದು ಹೆಸರಿಡಲಾಗಿದೆ ಎಂಬ ಐತಿಹಾಸಿಕ ಅಂಶವನ್ನು ಸಚಿವರು ನೆನಪಿಸಿದರು.

“ಸಮಾಜವೊಂದನ್ನು ಸುಧಾರಿಸಲು ಒಬ್ಬ ಯುಗಪುರುಷ ಬೇಕು. ದಲಿತರ ಏಳಿಗೆಗಾಗಿ ಅಂಬೇಡ್ಕರ್, ಲಿಂಗಾಯತ ಸಮಾಜದ ಸುಧಾರಣೆಗಾಗಿ ಬಸವಣ್ಣನವರು ಹೇಗೆ ಶ್ರಮಿಸಿದರೋ, ಹಾಗೆಯೇ 1739ರಲ್ಲಿ ಸೇವಾಲಾಲರು ಬಂಜಾರ ಸಮುದಾಯದ ಸುಧಾರಣೆಗೆ ಅಡಿಪಾಯ ಹಾಕಿದರು.”

ಬಂಜಾರ ಸಮುದಾಯದ ದೇವಸ್ಥಾನದ ನಿರ್ಮಾಣಕ್ಕಾಗಿ 30 ಲಕ್ಷ ರೂಪಾಯಿ ದೇಣಿಗೆ ಘೋಷಿಸಿದ ಸಚಿವರು, ಮಹಾತ್ಮರ ವಿಚಾರಧಾರೆಗಳು ನಮ್ಮ ಬದುಕಿಗೆ ದಾರಿದೀಪವಾಗಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ ಸೇರಿದಂತೆ ಸುರೇಶ ರಾಠೋಡ, ಆನಂದ ಪಮ್ಮಾರ, ಪ್ರಕಾಶ ರಾಠೋಡ, ರಾಜು ರಾಠೋಡ ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !