ಐಪಿಎಲ್ ಆರಂಭಕ್ಕೆ ಕ್ಷಣಗಣನೆ: ಯಾವ ತಂಡಕ್ಕೆ ಯಾರು ಕ್ಯಾಪ್ಟನ್? ಇಲ್ಲಿದೆ ಮಾಹಿತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಐಪಿಎಲ್ ಆರಂಭಕ್ಕೆ ಕ್ಷಣಗಣನೆ ಬಾಕಿ ಉಳಿದಿದ್ದು, ಇತ್ತ ತಂಡಗಳ ನಾಯಕರು ಬದಲಾಗುತ್ತಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್​ಗೂ ಮೊದಲು ಮುಂಬೈ ಇಂಡಿಯನ್ಸ್ , ಗುಜರಾತ್ ಟೈಟಾನ್ಸ್, ಸನ್‌ರೈಸರ್ಸ್ ಹೈದರಾಬಾದ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಗಳು ಕೂಡ ತಮ್ಮ ತಂಡದ ನಾಯಕರನ್ನು ಬದಲಿಸಿವೆ.

7 ನೇ ಆವೃತ್ತಿಗೂ ಮೊದಲು ತಂಡದ ನಾಯಕನನ್ನು ಬದಲಿಸಿದ ಮೊದಲ ತಂಡವೆಂದರೆ ಅದು ಮುಂಬೈ ಇಂಡಿಯನ್ಸ್. ದುಬೈನಲ್ಲಿ ನಡೆದ ಮಿನಿ ಹರಾಜಿನ ನಂತರ ಹಾರ್ದಿಕ್ ಪಾಂಡ್ಯರನ್ನು ಟ್ರೇಡಿಂಗ್ ಮೂಲಕ ತಂಡಕ್ಕೆ ಸೇರಿಸಿಕೊಂಡ ಮುಂಬೈ, ರೋಹಿತ್ ಶರ್ಮಾ ಬದಲಿಗೆ ಹಾರ್ದಿಕ್ ಪಾಂಡ್ಯಗೆ ಅಂದೇ ನಾಯಕತ್ವವನ್ನು ಹಸ್ತಾಂತರಿಸಿತು.

ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಸೇರಿಕೊಂಡ ನಂತರ ಗುಜರಾತ್ ಟೈಟಾನ್ಸ್ ಫ್ರಾಂಚೈಸ್ ತನ್ನ ತಂಡದ ನಾಯಕತ್ವವನ್ನು ಯುವ ಆರಂಭಿಕ ಆಟಗಾರ ಶುಭ್​ಮನ್​ ಗಿಲ್​ಗೆ ಹಸ್ತಾಂತರಿಸಿತು.

ಮಿನಿ ಹರಾಜಿನಲ್ಲಿ ಬರೋಬ್ಬರಿ 20.50 ಕೋಟಿ ನೀಡಿ ಖರೀದಿಸಿದ್ದ ಆಸ್ಟ್ರೇಲಿಯಾದ ವಿಶ್ವಕಪ್ ವಿಜೇತ ನಾಯಕ ಪ್ಯಾಟ್ ಕಮಿನ್ಸ್ ಅವರನ್ನು ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ತನ್ನ ತಂಡದ ನೂತನ ನಾಯಕನಾಗಿ ನೇಮಿಸಿತು. ಕಮಿನ್ಸ್​ಗೂ ಮೊದಲು ಈ ತಂಡದ ನಾಯಕತ್ವ ಐಡೆನ್ ಮಾರ್ಕ್ರಾಮ್ ಕೈನಲ್ಲಿತ್ತು.

2022 ರ ಅಂತ್ಯದಲ್ಲಿ ರಸ್ತೆ ಅಪಘಾತಕ್ಕೀಡಾಗಿ ಕ್ರಿಕೆಟ್​ನಿಂದ ದೂರ ಉಳಿದಿದ್ದ ರಿಷಬ್ ಪಂತ್ ಇದೀಗ ಚೇತರಿಸಿಕೊಂಡು ಮತ್ತೆ ಐಪಿಎಲ್ ಅಖಾಡಕ್ಕಿಳಿದಿದ್ದಾರೆ. ಪಂತ್ ಅನುಪಸ್ಥಿತಿಯಲ್ಲಿ ಕಳೆದ ಆವೃತ್ತಿಯಲ್ಲಿ ಡೇವಿಡ್ ವಾರ್ನರ್ ತಂಡದ ನಾಯಕತ್ವ ನಿರ್ವಹಿಸಿದ್ದರು. ಆದರೀಗ ಪಂತ್ ವಾಪಸ್ಸಾತಿಯಿಂದಾಗಿ ನಾಯಕತ್ವ ವಹಿಸಿಕೊಂಡಿದ್ದಾರೆ.

ಗಾಯದ ಸಮಸ್ಯೆಯಿಂದಾಗಿ ಶ್ರೇಯಸ್ ಅಯ್ಯರ್ ಕಳೆದ ಐಪಿಎಲ್ ಆಡಲು ಸಾಧ್ಯವಾಗಲಿಲ್ಲ. ಅವರ ಅನುಪಸ್ಥಿತಿಯಲ್ಲಿ ನಿತೀಶ್ ರಾಣಾ ಕೆಕೆಆರ್ ತಂಡವನ್ನು ಮುನ್ನಡೆಸಿದ್ದರು. ಇದೀಗ ಮತ್ತೊಮ್ಮೆ ಕೆಕೆಆರ್ ತಂಡವನ್ನು ಸೇರಿಕೊಂಡಿರುವ ಶ್ರೇಯಸ್ ಅಯ್ಯರ್​ಗೆ ನಾಯಕತ್ವ ಹಸ್ತಾಂತರಿಸಲಾಗಿದೆ.

ಅದ್ಭುತ ನಾಯಕತ್ವದ ಗುಣಗಳನ್ನು ಹೊಂದಿರುವ ಕನ್ನಡಿಗ ಕೆ ಎಲ್ ರಾಹುಲ್ ಇದೀಗ ಮತ್ತೊಮ್ಮೆ ನಾಯಕನಾಗಿ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಲಖನೌಗೆ ಕಪ್ ಗೆಲ್ಲಿಸಿಕೊಡಬೇಕಾದ ಗುರಿ ರಾಹುಲ್ ಮೇಲಿದೆ.

ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ ಮತ್ತೊಮ್ಮೆ ನಾಯಕನಾಗಿ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ.

ಚೊಚ್ಚಲ ಆವೃತ್ತಿಯ ಐಪಿಎಲ್ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಂಡವನ್ನು ಮತ್ತೊಮ್ಮೆ ಸಂಜು ಸ್ಯಾಮ್ಸನ್ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಸಂಜು ಸ್ಯಾಮ್ಸನ್ ಬಲಿಷ್ಠ ತಂಡದೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

ಆರ್‌ಸಿಬಿ ತಂಡದ ನಾಯಕರಾಗಿ ಫಾಫ್ ಡು ಪ್ಲೆಸಿಸ್ ಮತ್ತೊಮ್ಮೆ ಮುಂದುವರೆಯಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!