ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ವಿಜಯದಶಮಿ ನಿಮಿತ್ತ ಮೈಸೂರಿನಲ್ಲಿ ಜಂಬೂ ಸವಾರಿ ನಡೆಯಲಿದೆ. 750 ಕೆಜಿ ತೂಕದ ಅಂಬಾರಿ ಒಳಗೆ ಪ್ರತಿಷ್ಠಾಪಿಸಲಾಗಿರುವ ತಾಯಿ ಚಾಮುಂಡೇಶ್ವರಿ ದೇವಿಯನ್ನು ಹೊತ್ತು ಅಭಿಮನ್ಯು ರಾಜ ಗಾಂಭಿರ್ಯದಿಂದ ರಾಜಬೀದಿಗಳಲ್ಲಿ ಸಾಗುತ್ತಾನೆ.
ಬೆಳಗ್ಗೆ 8 ಗಂಟೆಗೆ ಚಾಮುಂಡಿ ಬೆಟ್ಟದಿಂದ ಉತ್ಸವ ಮೂರ್ತಿ ಮೆರವಣಿಗೆಯಲ್ಲಿ ಅರಮನೆ ತಲುಪುತ್ತದೆ. ಇದಾದ ನಂತರ 10.15ಕ್ಕೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉತ್ತರ ಪೂಜೆ ನೆರವೇರಿಸುವರು ಈ ವೇಳೆ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆ ಕೊಳ ತಲುಪಲಿದೆ. ಬಳಿಕ ಅರಮನೆಯ ಕರಿಕಲ್ಲು ತೊಟ್ಟಿಯಲ್ಲಿ ಬೆಳಗ್ಗೆ 10.45ರಿಂದ ಕಾಳಗ ನಡೆಯಲಿದೆ.
ನಂತರ 11.20 ರಿಂದ 11.45ರವರೆಗೆ ಅರಮನೆ ಅಂಗಳದ ಭುವನೇಶ್ವರಿ ದೇಗುಲಕ್ಕೆ ವಿಜಯಯಾತ್ರೆ ಸಾಗುತ್ತದೆ. ಇಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಬನ್ನಿಪೂಜೆ ನೆರವೇರಿಸುತ್ತಾರೆ. ನಂತರ ಅರಮನೆಗೆ ಆಗಮಿಸಿ ಕಂಕಣ ವಿಸರ್ಜನೆ ಮಾಡುತ್ತಾರೆ.
ಮಧ್ಯಾಹ್ನ ಶುಭ ಮಕರ ಲಗ್ನದಲ್ಲಿ 1.41ರಿಂದ 2.10ರ ನಡುವೆ ನಂದಿ ಧ್ವಜಕ್ಕೆ ಪೂಜೆ ನೆರವೇರಿಸಲಾಗುತ್ತದೆ. ಬಳಿಕ ಸಂಜೆ ಕುಂಭ ಲಗ್ನ 4 ರಿಂದ 4.30ರ ನಡುವೆ ಜಂಬೂಸವಾರಿಗೆ ಚಾಲನೆ ದೊರೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ದೇವಿ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿಗೆ ಚಾಲನೆ ನೀಡಲಿದ್ದಾರೆ.