ಹೊಸದಿಗಂತ ಡಿಜಿಟಲ್ ಡೆಸ್ಕ್:
18ನೇ ಲೋಕಸಭೆಯ ಮೊದಲ ಅಧಿವೇಶನದಲ್ಲಿ ನೂತನನಾಗಿ ಆಯ್ಕೆಯಾಗಿರುವ ಸಂಸದರು ಪ್ರಮಾಣವಚನ ಸ್ವೀಕರಿಸುತ್ತಿದ್ದು, ಈ ವೇಳೆ ಎಐಎಂಎಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ಯಾಲೆಸ್ತೀನ್ ಪರ ಘೋಷಣೆ ಕೂಗುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ಇದಕ್ಕೆ ಬಿಜೆಪಿ ಸಂಸದರು ಕೌಂಟರ್ ಕೊಟ್ಟಿದ್ದು, ಇದೀಗ ಪರ-ವಿರೋಧದ ಚರ್ಚೆ ನಡೆಯುತ್ತಿದೆ.
ಹೈದರಾಬಾದ್ ಕ್ಷೇತ್ರದ ಸಂಸದರಾಗಿ ಲೋಕಸಭೆಯಲ್ಲಿ ಪ್ರಮಾಣವಚನ ಸ್ವೀಕರಿಸಿದ ಓವೈಸಿ ಕೊನೆಯಲ್ಲಿ ಜೈ ಪ್ಯಾಲೆಸ್ತೀನ್ ಎಂದು ಘೋಷಣೆ ಕೂಗಿದ್ದಾರೆ. ಕೂಡಲೇ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸಂಸದರು ಗದ್ದಲವನ್ನು ಎಬ್ಬಿಸಿದರು. ಈ ವೇಳೆ ಹಂಗಾಮಿ ಸ್ಪೀಕರ್ ರಾಧಾಮೋಹನ್ ಸಿಂಗ್, ಘೋಷಣೆಯನ್ನು ದಾಖಲೆಯಿಂದ ತೆಗೆದುಹಾಕುವಂತೆ ಸೂಚನೆ ನೀಡಿದರು.
ಬಳಿಕ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದ ಬಿಜೆಪಿಯ ಛತ್ರ ಪಾಲ್ ಸಿಂಗ್ ಗಂಗ್ವಾರ್ ಕೊನೆಯಲ್ಲಿ ‘ಜೈ ಹಿಂದು ರಾಷ್ಟ್ರ’ ಎಂದು ಘೋಷಣೆ ಕೂಗಿದರು. ಇದಾದ ಬಳಿಕ ಗಾಜಿಯಾಬಾದ್ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ ಅತುಲ್ ಗರ್ಗ್ ತಮ್ಮ ಭಾಷಣದ ಕೊನೆಯಲ್ಲಿ ನರೇಂದ್ರ ಮೋದಿ ಜಿಂದಾಬಾದ್ ಎಂದು ಘೋಷಣೆ ಕೂಗಿದರು. ಇದಕ್ಕೆ ವಿಪಕ್ಷಗಳ ಸದಸ್ಯರು ಆಕ್ಷೇಪಿಸುತ್ತಿದ್ದಂತೆ ‘ಹೆಡ್ಗೆವಾರ್’ ಜಿಂದಾಬಾದ್ ಎಂದು ಘೋಷಣೆ ಕೂಗಿದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದೀಗ ಸಂಸತ್ತಿನಲ್ಲಿ ಘೋಷಣೆ ಕೂಗಿರುವುದು ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಎನ್ಡಿಎ-ಇಂಡಿಯಾ ಕೂಟದ ನಾಯಕರ ನಡುವಿನ ಕೆಸರೆರಚಾಟಕ್ಕೆ ಕಾರಣವಾಗಿದೆ.