152 ಟೇಬಲ್‌ಗಳಲ್ಲಿ ಮತ ಎಣಿಕೆ; ಮಧ್ಯಾಹ್ನದ ವೇಳೆ ಫಲಿತಾಂಶ ಸಾಧ್ಯತೆ: ದ.ಕ. ಜಿಲ್ಲಾಧಿಕಾರಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನ ಸಭಾ ಕ್ಷೇತ್ರಗಳ ಮತ ಎಣಿಕೆ ಶನಿವಾರ (ಇಂದು) ಪೂರ್ವಾಹ್ನ 8 ಗಂಟೆಗೆ ಸುರತ್ಕಲ್‌ನ ರಾಷ್ಟ್ರೀಯ ತಾಂತ್ರಿಕ ಸಂಸ್ಥೆಯಲ್ಲಿ (ಎನ್‌ಐಟಿಕೆ) ನಡೆಯಲಿದೆ. ಮೊದಲಿಗೆ ಅಂಚೆ ಮತಗಳು ಮತ್ತು ಹಿರಿಯ ನಾಗರಿಕರು-ವಿಕಲ ಚೇತನರ ಮತಪತ್ರಗಳನ್ನು ಎಣಿಕೆ ಮಾಡಲಾಗುವುದು. 8.30ಕ್ಕೆ ಇವಿಎಂಗಳ ಮತಗಳ ಎಣಿಕೆ ಆರಂಭಿಸಲಾಗುವುದು. ಮಧ್ಯಾಹ್ನದ ವೇಳೆ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ತಿಳಿಸಿದ್ದಾರೆ.

ಅವರು ಶುಕ್ರವಾರ ಮತ ಎಣಿಕೆ ಕೇಂದ್ರವಾದ ಎನ್‌ಐಟಿಕೆ ಸುರತ್ಕಲ್‌ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮತ ಎಣಿಕೆಗೆ ಕೈಗೊಂಡಿರುವ ಸಿದ್ಧತೆಗಳನ್ನು ವಿವರಿಸಿದರು.

152 ಎಣಿಕೆ ಟೇಬಲ್‌ಗಳು ಪ್ರತಿಯೊಂದು ಕ್ಷೇತ್ರದ ವಿಎಂಗಳ ಮತ ಎಣಿಕೆಗಾಗಿ ತಲಾ 14 ಟೇಬಲ್‌ಗಳನ್ನು ಜೋಡಿಸಲಾಗಿದೆ. ಹಿರಿಯರ ಮತಪತ್ರ ಮತ್ತು ಅಂಚೆ ಮತಪತ್ರಗಳ ಎಣಿಕೆಗಾಗಿ ತಲಾ 5 ಟೇಬಲ್‌ಗಳಿರುತ್ತವೆ. ಮತಪತ್ರ ಮತ್ತು ಅಂಚೆ ಮತಗಳ ಎಣಿಕೆಯ ಪ್ರತಿಯೊಂದು ಟೇಬಲ್‌ಗೆ ಒಬ್ಬ ಸಹಾಯಕ ಚುನಾವಣಾಧಿಕಾರಿಯನ್ನು ನೇಮಕ ಮಾಡಲು ಚುನಾವಣಾ ಆಯೋಗ ಸೂಚಿಸಿದೆ ಎಂದರು.

ಇವಿಎಂಗಳ ಪ್ರತಿ ಟೇಬಲ್‌ಗೆ ಮೂವರು ಎಣಿಕೆ ಸಿಬ್ಬಂದಿ ಇರುತ್ತಾರೆ. ಮತಪತ್ರ-ಅಂಚೆ ಮತಪತ್ರಗಳ ಎಣಿಕೆ ಟೇಬಲ್‌ಗೆ ಸಹಾಯಕ ಚುನಾವಣಾಧಿಕಾರಿ ಸಹಿತ ನಾಲ್ಕು ಸಿಬ್ಬಂದಿ ಇರುತ್ತಾರೆ. ಒಟ್ಟು 544 ಸಿಬ್ಬಂದಿಯನ್ನು ಮತ ಎಣಿಕೆಗಾಗಿ ನಿಯೋಜಿಸಲಾಗಿದೆ. ಎಲ್ಲಾ ಎಣಿಕೆ ಟೇಬಲ್‌ಗಳಿಗೆ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಎಣಿಕೆ ಕಾರ್ಯವನ್ನು ರಾಜ್ಯ ಮತ್ತು ಕೇಂದ್ರ ಮುಖ್ಯ ಚುನಾವಣಾಧಿಕಾರಿಗಳ ಸಹಿತ ಆಯೋಗದ ಕಚೇರಿಯ ಅಧಿಕಾರಿಗಳು ವೀಕ್ಷಿಸ ಬಹುದಾಗಿದೆ ಎಂದು ರವಿಕುಮಾರ್ ವಿವರಿಸಿದರು.

18 ಸುತ್ತುಗಳು-ಪ್ರವೇಶ ನಿರ್ಬಂಧ
ಪ್ರತಿಯೊಂದು ಕ್ಷೇತ್ರದ ಮತ ಎಣಿಕೆ 16ರಿಂದ18 ಸುತ್ತುಗಳಲ್ಲಿ ಮುಕ್ತಾಯಗೊಳ್ಳಲಿದೆ. ಮತಪತ್ರಗಳ ಎಣಿಕೆ ಪ್ರಗತಿಯಲ್ಲಿ ಇರುವಾಗಲೇ ಇವಿಎಂಗಳ ಮತ ಎಣಿಕೆಯನ್ನು ಪೂರ್ಣಗೊಳಿಸಲು ಆಯೋಗ ಸಮ್ಮತಿಸಿದೆ. ಎಣಿಕೆ ಸಿಬ್ಬಂದಿ ಮತ್ತು ಏಜೆಂಟ್‌ಗಳು ಬೆಳಿಗ್ಗೆ 7 ಗಂಟೆಯೊಳಗೆ ಮತ ಎಣಿಕೆ ಕೇಂದ್ರದಲ್ಲಿ ಹಾಜರಿರಬೇಕು. ಅಭ್ಯರ್ಥಿ ಅಥವಾ ಆತನ ಏಜೆಂಟ್‌ಗೆ ಚುನಾವಣಾಧಿಕಾರಿಗಳ ಆಸನದ ಪಕ್ಕದಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮತ ಎಣಿಕೆ ಸಿಬ್ಬಂದಿ, ಭದ್ರತಾ ಸಿಬ್ಬಂದಿ, ಚುನಾವಣಾಧಿಕಾರಿಗಳು, ಅಭ್ಯರ್ಥಿಗಳು, ಅಧಿಕೃತ ಏಜೆಂಟರು, ಚುನಾವಣಾ ಆಯೋಗದಿಂದ ಪಾಸ್ ಪಡೆದಿರುವ ಮಾಧ್ಯಮ ಪ್ರತಿನಿಧಿಗಳಿಗೆ ಮಾತ್ರ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶ ಇರುತ್ತದೆ.

ಭದ್ರತೆ
ಇವಿಎಂ ಮತ್ತು ವಿವಿಪ್ಯಾಟ್‌ಗಳ ಭದ್ರತಾ ಕೊಠಡಿಗಳು ಇರುವ ಮತ ಎಣಿಕೆ ಕೇಂದ್ರದ ನೂರು ಮೀಟರ್ ಸುತ್ತಳತೆಯಲ್ಲಿ ಅನಧಿಕೃತ ವ್ಯಕ್ತಿಗಳು, ವಾಹನಗಳು ಪ್ರವೇಶಿದಂತೆ ಭದ್ರತಾ ವಲಯ ನಿರ್ಮಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!