ಹೊಸದಿಗಂತ ಡಿಜಿಟಲ್ ಡೆಸ್ಕ್:
ಮನೆಯಲ್ಲಿ ನಡೆಯುತ್ತಿದ್ದ ನಿತ್ಯದ ಜಗಳಗಳಿಂದ ಬೇಸತ್ತು ಪತಿ-ಪತ್ನಿ ನೇಣಿಗೆ ಶರಣಾಗಿರುವ ಘಟನೆ ಬಾಗಲಕೋಟೆಯ ಮುಧೋಳ ತಾಲೂಕಿನ ಕುಳಲಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು 35 ವರ್ಷದ ಅಪ್ಪಾಶಿ ನಡುವಿನಮನಿ ಮತ್ತು 30 ವರ್ಷದ ರಾಜೇಶ್ವರಿ ನಡುವಿನಮನಿ ಎಂದು ಗುರುತಿಸಲಾಗಿದೆ. ದಂಪತಿ ಹಾಗೂ ಕುಟುಂಬದವರ ನಡುವೆ ವರ್ಷಗಳಿಂದಲೂ ಸಮಸ್ಯೆ ಇತ್ತು. ಕುಟುಂಬದವರ ವಿಚಾರಕ್ಕೆ ನಿತ್ಯವೂ ದಂಪತಿ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಕೆಲಸ ಮುಗಿಸಿ ಮನೆಗೆ ಬಂದಾಗ ಬರೀ ಜಗಳ ನೆಮ್ಮದಿಯೇ ಇಲ್ಲ ಎನ್ನುವ ಕಾರಣದಿಂದ ಮನೆಯ ದನದ ಕೊಟ್ಟಿಗೆಯಲ್ಲಿ ಅಪ್ಪಾಶಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತ್ನಿ ರಾಜೇಶ್ವರಿ ದನದ ಕೊಟ್ಟಿಗೆಯಲ್ಲಿ ಪತಿ ಆತ್ಮಹತ್ಯೆಗೆ ಶರಣಾಗಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ.
ನಂತರ ಏನು ಮಾಡುವುದು ಎಂದು ತೋಚದೇ ರೂಮಿಗೆ ಬಂದು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ದಂಪತಿಗೆ ಇಬ್ಬರು ಪುಟ್ಟ ಹೆಣ್ಣುಮಕ್ಕಳಿದ್ದಾರೆ. ಮಕ್ಕಳ ಬಗ್ಗೆ ಆಲೋಚಿಸದೇ ತಂದೆ ತಾಯಿ ಇಬ್ಬರೂ ನೇಣಿಗೆ ಶರಣಾಗಿದ್ದು, ಮಕ್ಕಳು ಅನಾಥರಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.



