November 20, 2026
Friday, November 20, 2026
spot_img

ಸರ್ಕಾರಿ ಶಾಲೆಗಳಿಗೆ 17 ಸಾವಿರ ಶಿಕ್ಷಕರ ನೇಮಕ: ಶೀಘ್ರದಲ್ಲೇ ಪರೀಕ್ಷಾ ದಿನಾಂಕ ಪ್ರಕಟ

ಹೊಸದಿಗಂತ ವರದಿ ರಾಯಚೂರು :

ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರ ಕೊರತೆಯನ್ನು ಪರಿಹರಿಸಲು ಹದಿನೇಳು ಸಾವಿರ ಶಿಕ್ಷಕರ ನೇಮಕಾತಿಗೆ ಸರ್ಕಾರ ಮುಂದಾಗಿದ್ದು ಈ ಹಿನ್ನಲೆಯಲ್ಲಿ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಇಂದೋ ನಾಳೆಯೋ ನೇಮಕಾತಿ ಪರೀಕ್ಷೆಯ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಮಧು ಬಂಗಾರಪ್ಪ ತಿಳಿಸಿದರು.

2026-27ನೇ ಸಾಲಿನ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಗುಣಾತ್ಮಕ ಫಲಿತಾಂಶ ಸುಧಾರಣೆಗಾಗಿ ಮಿಷನ್ 40+ ಸಂಕಲ್ಪ 2.0 ಕಾರ್ಯಕ್ರಮದ ವಿಭಾಗದ ಮಟ್ಟದ ಸಂಪನ್ಮೂಲ ಶಿಕ್ಷಕರ ಕಾರ್ಯಾಗಾರಕ್ಕೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲದೆ ಅನುದಾನಿತ ಶಾಲೆಗಳಿಗೂ ಸುಮಾರು ಐದು ಸಾವಿರದ ಐದನೂರು ರಿಂದ ಆರು ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಪಿಯುಸಿ ಸೇರಿದಂತೆ ಒಟ್ಟು ಮುವತ್ತಾರು ಸಾವಿರಕ್ಕೂ ಅಧಿಕ ಬೋಧಕರ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಕಳೆದ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಶೇ.೦.೨ ಹೆಚ್ಚು ಫಲಿತಾಂಶ ಪಡೆದು ತಮ್ಮ ಸಾಮರ್ಥ್ಯ ಸಾಬೀತುಪಡಿಸಿವೆ. ಈ ಬಾರಿ ’60 ಪ್ಲಸ್ ಮಿಷನ್’ ಅಡಿ ಶೇ.60ಕ್ಕಿಂತ ಹೆಚ್ಚು ಅಂಕ ಹಾಗೂ ಶೇ.100ರಷ್ಟು ಫಲಿತಾಂಶ ಪಡೆಯುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಸೆಷನ್ ಮುಗಿದ ಬಳಿಕ ಸಂಪನ್ಮೂಲ ವ್ಯಕ್ತಿಗಳಿಂದ ಮಕ್ಕಳಿಗೆ ಮಾರ್ಗದರ್ಶನ ನೀಡಲಾಗುವುದು ಎಂದು ಹೇಳಿದರು.

ಮಕ್ಕಳಲ್ಲಿ ತಂದೆ-ತಾಯಿ ಮತ್ತು ಸಮಾಜದ ಬಗ್ಗೆ ಗೌರವ ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸಲು ಉಚಿತವಾಗಿ ‘ನೀತಿ ವಿಜ್ಞಾನ’ ಪುಸ್ತಕಗಳನ್ನು ನೀಡಲಾಗಿದೆ. ರಾಜ್ಯದಲ್ಲಿ ಯಾವುದೇ ಸರ್ಕಾರಿ ಶಾಲೆಗಳನ್ನು ಮುಚ್ಚುವ ಅಥವಾ ವಿಲೀನಗೊಳಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಒಬ್ಬ ಮಗು ಇದ್ದರೂ ಶಾಲೆಯನ್ನು ನಡೆಸಲಾಗುವುದು ಮತ್ತು ಬಿಸಿಯೂಟ ಹಾಗೂ ಶಿಕ್ಷಕರ ವ್ಯವಸ್ಥೆ ಮುಂದುವರಿಯಲಿದೆ. ಈ ಕುರಿತು ಹರಡುವ ವದಂತಿಗಳಿಗೆ ಪೋಷಕರು ಕಿವಿಗೊಡಬಾರದು ಎಂದರು.

Must Read