ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಗೆಲ್ಲಾ ಫೋಟೊಶೂಟ್‌ಗಳಿಗೆ ಮುಗಿಬೀಳೋ ಜನ ಜಾಗ, ಭದ್ರತೆ ಬಗ್ಗೆ ತಲೆಕೆಡಿಸಿಕೊಳ್ಳದೆ ಫೋಟೊಶೂಟ್ ಮಾಡುತ್ತಾರೆ.
ಭದ್ರತಾ ದೃಷ್ಟಿಯಿಂದ ತುಂಗಭದ್ರಾ ಜಲಾಶಯದ ಮೇಲೆ ಯಾವುದೇ ತರಹದ ಚಿತ್ರೀಕರಣ ನಿಷೇಧಿಸಲಾಗಿದೆ. ಆದರೂ ಕೂಡ ತುಂಗಭದ್ರಾ ಜಲಾಶಯದ ಮೇಲಿನ ಪ್ರೀ ವೆಡ್ಡಿಂಗ್ ಫೋಟೋ ವೈರಲ್ ಆಗಿದೆ.
KA-01 MY 2174 ಬೆಂಗಳೂರು ಪಾಸಿಂಗ್ ಕಾರನ್ನು ಜಲಾಶಯ ಮೇಲ್ಭಾಗದಲ್ಲಿ ಕಾರು ತೆಗೆದುಕೊಂಡು ಹೋಗಿ, ಅಲ್ಲಿ ಕಾರಿನ ಮುಂದೆ ಮತ್ತು ಮೇಲೆ ಜೋಡಿಗಳು ಫೋಟೋ ತೆಗೆಸಿಕೊಂಡಿದ್ದಾರೆ.
ನಿಷೇಧ ಇದ್ದರೂ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಹೇಗೆ ನಡೆಯಿತು? ಪ್ರೀ ವೆಡ್ಡಿಂಗ್ ಫೋಟೋ ಶೂಟ್ಗೆ ಅಧಿಕಾರಿಗಳು ಅನುಮತಿ ನೀಡಿದ್ರಾ? ಎಂಬ ಪ್ರಶ್ನೆಗಳು ಉದ್ಭವಾಗಿವೆ. ಯಾವಾಗ ಫೋಟೋ ಶೂಟ್ ಆಗಿದೆ, ಪರವಾನಿಗೆ ನೀಡಿದವರು ಯಾರು ಎಂಬುವುದರ ಬಗ್ಗೆ ತನಿಖೆ ನಡೆಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ತಿಂಗಳು ಆಗಸ್ಟ್ 10 ರಂದು ತುಂಗಭದ್ರಾ ಜಲಾಶಯದ 19ನೇ ಕ್ರಸ್ಟಗೇಟ್ ಕೊಚ್ಚಿಕೊಂಡು ಹೋಗಿತ್ತು. ಇದು ದೇಶದಲ್ಲಿ ಸಾಕಷ್ಟು ಸುದ್ದಿಯಾಗಿತ್ತು. 19ನೇ ಗೇಟ್ ವೊಂದರಿಂದಲೇ ಬರೋಬ್ಬರಿ 35 ಸಾವಿರ ಕ್ಯೂಸೆಕ್ ನೀರು ಹೊರ ಹೋಗಿತ್ತು. ಜಲಾಶಯದಿಂದ ಒಂದೇ ವಾರದಲ್ಲಿ 45 ಟಿಎಂಸಿಗೂ ಹೆಚ್ಚು ನೀರು ವ್ಯರ್ಥವಾಗಿ ಹರಿದು ಹೋಗಿತ್ತು.