ಹೊಸದಿಗಂತ ವರದಿ, ಬಳ್ಳಾರಿ:
ಯಾವುದೇ ಕ್ಷೇತ್ರವಿರಲಿ ಧೈರ್ಯದಿಂದ ಮುನ್ನುಗ್ಗಬೇಕು, ಆಗ ಖಂಡಿತವಾಗಿ ಗೆಲವು ನಮ್ಮದಾಗಲಿದೆ. ಯಾವುದೇ ಕಾರಣಕ್ಕೂ ನಕಾರಾತ್ಮಕ ಆಲೋಚನೆಗಳನ್ನು ಮಾಡದಿರಿ, ಆದಷ್ಟು ಪಾಸಿಟಿವ್ ಆಗಿರಿ ಆಗ ಎಲ್ಲವನ್ನೂ ಸಾಧಿಸಬಹುದು ಎಂದು ಶಾಸಕ ನಾರಾ ಭರತ್ ರೆಡ್ಡಿ ಅವರು ಹೇಳಿದರು.
ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ 2023-24ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಳೆದ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಿದಾಗ ಸಾಕಷ್ಟು ಜನ ದೊಡ್ಡವರು ನನ್ನ ಗೆಲುವಿಗೆ ಅಡ್ಡಿ ಮಾಡಲು ಮುಂದಾದರು, ಯಾವುದನ್ನೂ ಲೆಕ್ಕಿಸದೇ ಧೈರ್ಯದಿಂದ ಮುಂದೆ ನಡೆದೆ. ನನ್ನ ಜನರ ಆಶೀರ್ವಾದದಿಂದ ಶಾಸಕರಾಗಿ ಆಯ್ಕೆಯಾದೆ ಎಂದು ತಮ್ಮದೇ ಉದಾಹರಣೆ ನೀಡಿದರು.
ಖಾಸಗಿ ಶಾಲೆಗಳ ವ್ಯಾಮೋಹ ಇತ್ತೀಚೆಗೆ ಹೆಚ್ಚಾಗಿದೆ, ಅಲ್ಲಿ ಶುಲ್ಕ ಮಾತ್ರ ಹೆಚ್ಚು, ಯಾವುದೇ ಸೌಲಭ್ಯಗಳಿರೋಲ್ಲ. ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿದ್ದು, ಪಾಲಕರು ಮಕ್ಕಳನ್ನು ಓದಿಸಲು ಮುಂದಾಗಬೇಕು ಎಂದರು. ಸರ್ಕಾರಿ ಶಾಲೆ ಮಕ್ಕಳು ಯಾವುದೇ ಸೌಲಭ್ಯಕ್ಕಾಗಿ ಬೇಡಿಕೆ ಇಟ್ಟರೆ ಖಂಡಿತ ಎಲ್ಲವನ್ನೂ ಮಾಡಿಕೊಡುವೆ ಎಂದು ಭರವಸೆ ನೀಡಿದರು.
ರಾಜ್ಯ ಸೇರಿದಂತೆ ನಾನಾ ಕಡೆಯ ಐಎಎಸ್, ಐಪಿಎಸ್ ಅಧಿಕಾರಿಗಳು ಸರ್ಕಾರಿ ಶಾಲೆಗಳಲ್ಲೇ ಓದಿದ್ದು ಎನ್ನುವುದನ್ನು ಮರೆಯಕೂಡದು, ಸರ್ಕಾರಿ ಶಾಲೆಗಳಲ್ಲಿ ಓದಿದವರಿಗೆ ಹೊರಗಿನ ಜ್ನಾನ ಹೆಚ್ಚಿರಲಿದೆ. ಖಾಸಗಿ ಶಾಲೆಯಲ್ಲಿ ಓದಿದ ಮಕ್ಕಳಿಗೆ ಯಾವಾಗಲೂ ಪುಸ್ತಕವೇ ಪ್ರಪಂಚ. ದಿನದ 24 ಗಂಟೆ ಅಭ್ಯಾಸದಲ್ಲೇ ಇರಲಿದ್ದಾರೆ, ಸರ್ಕಾರಿ ಶಾಲೆ ಮಕ್ಕಳ ಧೈರ್ಯವೇ ಬೇರೆ ಎಂದರು.
ಪಾಲಕರು ಮಕ್ಕಳ ಮೇಲೆ ಸಾಕಷ್ಟು ಕನಸುಗಳನ್ನು ಇಟ್ಟುಕೊಂಡಿರುತ್ತಾರೆ, ಅವರ ನಿರೀಕ್ಷೆಗಳನ್ನು ಎಂದೂ ಮಕ್ಕಳು ಹುಸಿಗೊಳಿಸಬಾರದು. ಪಾಲಕರ ಕನಸಿನಂತೆ ಮಕ್ಕಳು ನಡೆದುಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಡಾ.ಶ್ರೀನಿವಾಸ್ ಮೂರ್ತಿ ಮಾತನಾಡಿದರು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಶಮೀಮ್ ಜೂಹಾರ್, ಅಭಿನಯ ಅಭಿಲಾಷ್, ಸದಸ್ಯರಾದ ತ್ರಿವೇಣಿ ಪತ್ತಾರ, ಕೆ.ಮಮತಾ ಭಂಗಿ, ಪ್ರಾಚಾರ್ಯ ಸುಲೇಖಾ, ಮಹಾನಗರ ಪಾಲಿಕೆ ಸದಸ್ಯರಾದ ಈರಮ್ಮ ಸುರೇಂದ್ರ, ಉಪನ್ಯಾಸಕಿ ಸುಜಾತಾ, ಶೋಭಾ ಕಾಳಿಂಗ , ಪ್ರೌಢ ಶಾಲೆ ಮುಖ್ಯಗುರು ಜಾ, ಗೌಸ್ ಭಾಷಾ, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಚಾನಾಳ್ ಶೇಖರ್, ಸುರೇಂದ್ರ, ಪ್ರಹ್ಲಾದ್ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.