8 ತಿಂಗಳ ಗರ್ಭಿಣಿಗೆ ಗರ್ಭಪಾತಕ್ಕೆ ಅನುಮತಿ ಕೊಟ್ಟ ಕೋರ್ಟ್: ಕಾರಣವೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್ :

ಮುಂಬೈನಲ್ಲಿ 26 ವರ್ಷದ ಮಹಿಳೆ 8 ತಿಂಗಳ ಗರ್ಭಿಣಿ, 20 ವಾರಗಳು ಕಳೆದ ಬಳಿಕ ಹೊಟ್ಟೆಯಲ್ಲಿರುವ ಮಗುವಿಗೆ ಮ್ಯಾಕ್ರೋಸೆಫಾಲಿ(ಅಸಹಜ ದೊಡ್ಡ ತಲೆ) ಮತ್ತು ಮೆದುಳಿಗೆ ಸಂಬಂಧಿಸಿದ ಗಂಭೀರ ಸಮಸ್ಯೆಗಳಿವೆ ಎಂಬುದು ತಿಳಿದುಬಂದಿದೆ.

ಜೆಜೆ ಆಸ್ಪತ್ರೆಯ ವೈದ್ಯಕೀಯ ಮಂಡಳಿಯು ಗರ್ಭಪಾತವನ್ನು ಸರ್ವಾನುಮತದಿಂದ ಶಿಫಾರಸು ಮಾಡಿತ್ತು. ಮಗುವಿಗೆ ಅಪಸ್ಮಾರ, ಮಾನಸಿಕ ದೌರ್ಬಲ್ಯ, ನಡೆಯಲು ತೊಂದರೆ ಮತ್ತು ದೃಷ್ಟಿ ದುರ್ಬಲತೆಯಂತಹ ಗಂಭೀರ ಆರೋಗ್ಯ ಸಮಸ್ಯೆಗಳಿವೆ ಎಂದು ಮಂಡಳಿ ತಿಳಿಸಿದೆ.

ಈ ಹಿನ್ನೆಲೆ ಕೇಂದ್ರ ಸರ್ಕಾರದ ಆಗಸ್ಟ್ 2018 ರ ಮಾರ್ಗಸೂಚಿಯನ್ನು ಉಲ್ಲೇಖಿಸಿ, ಮಹಿಳೆ 20 ವಾರಗಳ ನಂತರ ಗರ್ಭಪಾತಕ್ಕೆ ಅನುಮತಿ ಕೋರಿದ್ದರು. ಮಹಿಳೆಯ ಸಂತಾನೋತ್ಪತ್ತಿ ಹಕ್ಕುಗಳು, ಆಕೆಯ ದೈಹಿಕ ಸ್ವಾಯತ್ತತೆ ಮತ್ತು ಆಯ್ಕೆ ಮಾಡುವ ಹಕ್ಕನ್ನು ಗಣನೆಗೆ ತೆಗೆದುಕೊಂಡು ವೈದ್ಯಕೀಯ ಮಂಡಳಿಯ ಅಭಿಪ್ರಾಯವನ್ನು ಬಾಂಬೆ ನ್ಯಾಯಾಲಯವು ಒಪ್ಪಿಕೊಂಡಿತು ಮತ್ತು ಗರ್ಭಪಾತಕ್ಕೆ ಅನುಮತಿ ನೀಡಿದೆ .

ಕೇಂದ್ರ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳು ಮತ್ತು ಮಹಾರಾಷ್ಟ್ರ ಸರ್ಕಾರ ಅಳವಡಿಸಿಕೊಂಡ ನೀತಿಯ ಪ್ರಕಾರ, ವೈದ್ಯಕೀಯ ತಜ್ಞರು ಅಗತ್ಯವೆಂದು ಭಾವಿಸಿದರೆ ವೈದ್ಯರು MTP ಕಾರ್ಯವಿಧಾನವನ್ನು ನಿರ್ವಹಿಸಲು ನಾವು ಅವಕಾಶ ನೀಡುತ್ತೇವೆ ಎಂದು ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೆರೆ ಮತ್ತು ನೀಲಾ ಗೋಕಲೆ ಅವರ ಪೀಠವು ಆದೇಶದಲ್ಲಿ ತಿಳಿಸಿದೆ.

ಗರ್ಭಾವಸ್ಥೆಯು 24 ವಾರಗಳಿಗಿಂತ ಹೆಚ್ಚು ಕಾಲ ಇದ್ದರೆ, ಭ್ರೂಣವು ಜೀವಂತವಾಗಿ ಜನಿಸದಂತೆ, ಅಲ್ಟ್ರಾಸೌಂಡ್-ಮಾರ್ಗದರ್ಶಿತ ಕಾರ್ಯವಿಧಾನದ ಮೂಲಕ ಭ್ರೂಣದ ಹೃದಯ ಬಡಿತವನ್ನು ನಿಲ್ಲಿಸಲು ಮಾರ್ಗಸೂಚಿಗಳು ಅವಕಾಶ ನೀಡುತ್ತವೆ ಎಂದು ಮಹಿಳೆಯ ವಕೀಲರಾದ ಮೀನಾಜ್ ಕಾಕ್ಲ್ಯಾ ನ್ಯಾಯಾಲಯದಲ್ಲಿ ವಾದಿಸಿದರು.

ಗರ್ಭಪಾತಕ್ಕೆ ಸಂಬಂಧಿಸಿದ ಕಾನೂನು ಏನು ಹೇಳುತ್ತದೆ? 20 ವಾರಗಳವರೆಗೆ ಯಾವುದೇ ವಿಶೇಷ ಅನುಮತಿಯಿಲ್ಲದೆ ಗರ್ಭಪಾತವನ್ನು ಮಾಡಬಹುದು. ಆದಾಗ್ಯೂ, 20 ರಿಂದ 24 ವಾರಗಳ ನಡುವೆ, ವೈದ್ಯರ ಸಮಿತಿಯ ಅನುಮೋದನೆಯ ನಂತರ ಕೆಲವು ಸಂದರ್ಭಗಳಲ್ಲಿ ಮಾತ್ರ ಇದನ್ನು ಮಾಡಬಹುದು. 24 ವಾರಗಳಿಗಿಂತ ಹೆಚ್ಚಿನ ಅವಧಿಯ ಗರ್ಭಧಾರಣೆಯನ್ನು ಅಂತ್ಯಗೊಳಿಸಲು ನ್ಯಾಯಾಲಯದ ಅನುಮತಿ ಅಗತ್ಯವಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!