ಹೊಸದಿಗಂತ ವರದಿ ಕಲಬುರಗಿ :
ಮಹಾ ಶಿವರಾತ್ರಿಯ ಪವಿತ್ರ ದಿನದಂದು ಜಿಲ್ಲೆಯ ಆಳಂದ ತಾಲೂಕಿನ ಲಾಡ್ಲೆ ಮಶಾಕ್ ದಗಾ೯ದಲ್ಲಿರುವ ಶ್ರೀ ರಾಘವ ಚೈತನ್ಯ ದೇವಸ್ಥಾನದ ಶಿವಲಿಂಗದ ವಿಶೇಷ ಪೂಜೆಗೆ ಇಲ್ಲಿಯ ವಕ್ಫ್ ಟ್ರಿಬೂನಲ್ ನ್ಯಾಯಾಲಯ ಆದೇಶ ನೀಡಿದ್ದು,ಮುಂಜಾಗ್ರತಾ ಕ್ರಮವಾಗಿ ಗುರುವಾರ ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಅಲೋಕ್ ಕುಮಾರ್ ಅವರು ಆಳಂದ ಪಟ್ಟಣದಲ್ಲಿ ರೂಟ್ ಮಾಚ್೯ (ಪಥ ಸಂಚಲನ) ನಡೆಸಿದರು.
ಆಳಂದ ಪೋಲಿಸ್ ಠಾಣೆಯಿಂದ ಪ್ರಾರಂಭವಾದ ರೂಟ್ ಮಾಚ್೯, ರಜನಿ ರೋಡ್,ಸಿದ್ದಾಥ೯ ಚೌಕ್,ಹಳೆ ತರಕಾರಿ ಮಾರುಕಟ್ಟೆ, ಮಹಾದೇವ ನಗರ,ದಗಾ೯ ರೋಡ್ ನಲ್ಲಿ ಫಥ ಸಂಚಲನ ಮಾಡಿದರು.
ತದನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಜಾಗ್ರತಾ ಕ್ರಮವಾಗಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ಹೋಗುವ ದೃಷ್ಟಿಯಿಂದ ಕೆಎಸ್ಆರಪಿ ತುಕಡಿ,ಡಿಆರ್ ತುಕಡಿ,ಕ್ಯೂ ಆರ್ ಟಿ, ಹಾಗೂ ವಿಶೇಷ ಪೋಲಿಸ್ ಪಡೆ ಸೇರಿದಂತೆ ಸುಮಾರು 500 ಕ್ಕೂ ಅಧಿಕ ಪೋಲಿಸ್ ಬಂದೋಬಸ್ತ್ ಸಲುವಾಗಿ ನಿಯೋಜನೆ ಮಾಡಲಾಗಿದೆ ಎಂದರು.