ಹೊಸದಿಗಂತ ವರದಿ,ಮಡಿಕೇರಿ:
ಕತ್ತಿಯಿಂದ ಕಡಿದು ನಾಲ್ವರನ್ನು ಕೊಲೆ ಮಾಡಿದ್ದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ ವೀರಾಜಪೇಟೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಪೊನ್ನಂಪೇಟೆ ತಾಲೂಕಿನ ಬೇಗೂರು ಗ್ರಾಮದ ಬಾಳುಗೋಡು ಎಂಬಲ್ಲಿ ನಾಲ್ವರನ್ನು ಮಂಡೆ ಕತ್ತಿಯಿಂದ ಕಡಿದು ಭೀಕರವಾಗಿ ಕೊಲೆ ಮಾಡಿ ದ್ದ ಮೂಲತಃ ಕೇರಳ ಮಾನಂದವಾಡಿಯ ಅತ್ತಿಮಾಲ ಕಾಲೋನಿಯ ನಿವಾಸಿ ಕೃಷ್ಣನ್ ಎಂಬವರ ಪುತ್ರ ಎ.ಕೆ. ಗಿರೀಶ್ ಎಂಬಾತನೇ ಗಲ್ಲು ಶಿಕ್ಷೆ ಹಾಗೂ 10ಸಾವಿರ ದಂಡ ಪಾವತಿಸುವ ಶಿಕ್ಷೆಗೆ ಗುರಿಯಾದವನಾಗಿದ್ದಾನೆ.
ಬೇಗೂರು ಗ್ರಾಮ ಬಾಳುಗೋಡು ಪ್ರದೇಶದಲ್ಲಿ ಬುಡಕಟ್ಟು ಜನಾಂಗದ ಕರಿಯ, ಗೌರಿ ( ಇಬ್ಬರೂ 70 ವರ್ಷ ಮೇಲ್ಪಟ್ಟವರು) ನಾಗಿ (30) ಕಾವೇರಿ (7), ಗಿರೀಶ್ (38) ಇವರುಗಳು ಒಂಟಿ ಮನೆಯಲ್ಲಿ ವಾಸಿಸುತ್ತಿದ್ದರು. ಇವರ ಪೈಕಿ ಆರೋಪಿ ಗಿರೀಶ್ ಎಂಬಾತ ನಾಗಿಯ ಮೂರನೇ ಗಂಡನಾಗಿದ್ದು, ಒಂದು ವರ್ಷದಿಂದ ಒಟ್ಟಿಗೆ ವಾಸವಾಗಿದ್ದರು. ನಾಗಿ ತನ್ನ ಎರಡನೇ ಗಂಡನಾದ ಸುಬ್ರಮಣಿ ಎಂಬಾತನೊಂದಿಗೆ ಪುನಃ ಸಂಬಂಧ ಹೊಂದಿದ್ದಾಳೆ ಎಂಬ ಸಂಶಯದಿಂದ ಆರೋಪಿ ಗಿರೀಶ್, ಕಳೆದ ಮಾ.27ರಂದು ರಾತ್ರಿ ನಾಗಿಯೊಂದಿಗೆ ಜಗಳವಾಡಿ ಮಂಡೆ ಕತ್ತಿಯಿಂದ ದೇಹದ ವಿವಿಧ ಭಾಗಗಳಿಗೆ ಕಡಿದು ಕೊಲೆ ಮಾಡಿದ್ದ. ಅಲ್ಲದೆ ತಡೆಯಲು ಬಂದ ನಾಗಿಯ ಅಜ್ಜ ಕರಿಯ, ಅಜ್ಜಿ ಗೌರಿ ಹಾಗೂ ತನ್ನ ಮಲ ಮಗಳಾದ ಕಾವೇರಿಯನ್ನು ಕೂಡಾ ಮಂಡೆ ಕತ್ತಿಯಿಂದ ಕಡಿದು ಬರ್ಬರವಾಗಿ ಹತ್ಯೆಗೈದಿದ್ದ.
ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಪೊನ್ನಂಪೇಟೆ ಪೊಲೀಸರು ಮಾ.28ರಂದು ಆರೋಪಿ ಗಿರೀಶನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಪ್ರಕರಣದ ತನಿಖಾಧಿಕಾರಿಯಾಗಿದ್ದ ಗೋಣಿಕೊಪ್ಪಲು ವೃತ್ತ ನಿರೀಕ್ಷಕ ಶಿವರಾಜ್ ಆರ್ ಮುಧೋಳ್ ಹಾಗೂ ತನಿಖಾ ಸಹಾಯಕರಾದ ಹೆಡ್ ಕಾನ್ಸ್ಟೇಬಲ್ ಅಬ್ದುಲ್ ಮಜೀದ್ ಕೆ.ಎ. ಮತ್ತು ಹೇಮಲತಾ ರೈ ಹಾಗೂ ಗೋಣಿಕೊಪ್ಪಲು ವೃತ್ತ ನಿರೀಕ್ಷಕರ ಕಛೇರಿಯ ಸಿಬ್ಬಂದಿಗಳು ಪ್ರಕರಣದ ಸಂಪೂರ್ಣ ತನಿಖೆ ಕೈಗೊಂಡು ಜೂ. 12ರಂದು ಆರೋಪಿ ಗಿರೀಶನ ವಿರುದ್ದ ವೀರಾಜಪೇಟೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ನಟರಾಜ್ ಎಸ್. ಅವರು ಗುರುವಾರ, ಆರೋಪಿ ಗಿರೀಶ್’ಗೆ ಗಲ್ಲು ಶಿಕ್ಷೆ ಹಾಗೂ ರೂ. 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಈ ಪ್ರಕರಣದ ಸರ್ಕಾರಿ ಅಭಿಯೋಜಕರಾಗಿ ಯಾಸಿನ್ ಅಹಮ್ಮದ್ ಅವರು ವಾದ ಮಂಡಿಸಿದ್ದರು.

