ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದೇ ಸಿರಿಂಜ್ನಿಂದ 39 ಮಕ್ಕಳಿಗೆ ಕೋವಿಡ್-19 ವ್ಯಾಕ್ಸಿನ್ ನೀಡಿರುವ ಘಟನೆಮಧ್ಯ ಪ್ರದೇಶದ ಖಾಸಗಿ ಶಾಲೆಯೊಂದರಲ್ಲಿ ಬೆಳಕಿಗೆ ಬಂದಿದೆ.
ಇಂಜೆಕ್ಷನ್ ಮಾಡುತ್ತಿರುವವರು ಎಲ್ಲ ಮಕ್ಕಳಿಗೂ ಒಂದೇ ಸಿರಿಂಜ್ ಉಪಯೋಗಿಸುತ್ತಿರುವುದನ್ನು ಕೆಲ ಮಕ್ಕಳ ಪಾಲಕರು ಗಮನಿಸಿ ಆಕ್ಷೇಪವೆತ್ತಿದ್ದಾರೆ.
ಇಲ್ಲಿನ ಜೈನ್ ಹೈಯರ್ ಸೆಕೆಂಡರಿ ಸ್ಕೂಲ್ ನಲ್ಲಿ ಆಯೋಜಿಸಲಾಗಿದ್ದ ಮೆಗಾ ವ್ಯಾಕ್ಸಿನೇಶನ್ ಮೇಳದಲ್ಲಿ ಈ ಅಚಾತುರ್ಯ ನಡೆದಿದ್ದು, ವ್ಯಾಕ್ಸಿನ್ ನೀಡಿಕೆ ಸಂಸ್ಥೆಯ ಜಿತೇಂದ್ರ ಅಹಿರ್ವಾರ್ ಎಂಬಾತನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
15 ವರ್ಷ ಮೇಲ್ಪಟ್ಟ 9 ರಿಂದ 12 ವರ್ಷದೊಳಗಿನ 39 ಮಕ್ಕಳಿಗೆ ಒಂದೇ ಸಿರಿಂಜ್ನಿಂದ ಇಂಜೆಕ್ಷನ್ ಮಾಡಲಾಗಿದೆ.
ಪಾಲಕರ ಪ್ರತಿಭಟನೆಯ ನಂತರ ಸಾಗರ್ ಇನ್-ಚಾರ್ಜ್ ಕಲೆಕ್ಟರ್ ಕ್ಷಿತಿಜ್ ಸಿಂಘಾಲ್, ಸ್ಥಳಕ್ಕೆ ಜಿಲ್ಲಾ ಮುಖ್ಯ ವೈದ್ಯಾಧಿಕಾರಿ ಮತ್ತು ಆರೋಗ್ಯ ಅಧಿಕಾರಿಯಾಗಿರುವ ಡಾ. ಡಿ ಕೆ ಗೋಸ್ವಾಮಿ ಅವರನ್ನು ಕಳುಹಿಸಿ ಘಟನೆಯ ಪರಿಶೀಲನೆ ಮಾಡುವಂತೆ ಸೂಚಿಸಿದ್ದಾರೆ. ಒಂದೇ ಸಿರಿಂಜ್ನಿಂದ ವ್ಯಾಕ್ಸಿನ್ ನೀಡಿದ ಆರೋಪಿ ಅಹಿರ್ವಾರ್ ಸ್ಥಳದಿಂದ ಪರಾರಿಯಾಗಿದ್ದು, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ.
ಭಾರತೀಯ ದಂಡ ಸಂಹಿತೆ ಸೆಕ್ಷನ್ 336 ಅಡಿಯಲ್ಲಿ ಅಹಿರ್ವಾರ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಗೋಪಾಲ್ ಗಂಜ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
39ರ ಪೈಕಿ 19 ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಗಿದ್ದು, ವರದಿ ನಾರ್ಮಲ್ ಬಂದಿವೆ. ಉಳಿದ ಮಕ್ಕಳ ಆರೋಗ್ಯ ತಪಾಸಣೆ ವರದಿಗಾಗಿ ಕಾಯಲಾಗುತ್ತಿದೆ.