ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಳೆಯಿಂದ (ಜ.10) ದೇಶದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆಯ ಬೂಸ್ಟರ್ ಡೋಸ್ ನೀಡಲಾಗುತ್ತದೆ.
ಈಗಾಗಲೇ ಆರಂಭವಾಗಿದ್ದ 15-18 ವರ್ಷದ ವಯಸ್ಸಿನ ಮಕ್ಕಳಿಗೆ ಕೋವಿಡ್ ಲಸಿಕೆ ನೀಡಿಕೆಯ ಅಭಿಯಾನದಲ್ಲಿ ಒಟ್ಟು 2 ಕೋಟಿ ಮಕ್ಕಳು ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ.
ಕೋವಿಡ್ ವಿರುದ್ಧದ ಹೋರಾಟಕ್ಕೆ ಮುಂಜಾಗ್ರತಾ ಕ್ರಮವಾಗಿ ಬೂಸ್ಟರ್ ಡೋಸ್ ಅಭಿಯಾನ ಪ್ರಾರಂಭವಾಗಲಿದೆ. ಈ ಬಗ್ಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕ ಹಾಗೂ ಹೆಚ್ಚುವರಿ ಕಾರ್ಯದರ್ಶಿ ವಿಕಾಸ್ ಶೀಲ್ ಟ್ವೀಟ್ ಮಾಡಿದ್ದು, ಆರೋಗ್ಯ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆಯ ಬೂಸ್ಟರ್ ಡೋಸ್ ಗೆ ಆನ್ ಲೈನ್ ನೋಂದಣಿ ಕೋವಿನ್ ಪೋರ್ಟಲ್ ನಲ್ಲಿ ಪ್ರಾರಂಭವಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಬೂಸ್ಟರ್ ಡೋಸ್ ಪಡೆಯುವವರು ಹೊಸ ನೋಂದಣಿ ಮಾಡಿಕೊಳ್ಳುವ ಅಗತ್ಯವಿಲ್ಲ. ನೇರವಾಗಿ ಕೋವಿಡ್ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಲಸಿಕೆ ಪಡೆಯಬಹುದಾಗಿದೆ. ಕೋವಿಡ್ ಲಸಿಕೆಯ 2ನೇ ಡೋಸ್ ಪಡೆದ 39 ವಾರಗಳ ಬಳಿಕ ಅಂದ್ರೆ 9 ತಿಂಗಳ ಬಳಿಕ ಬೂಸ್ಟರ್ ಡೋಸ್ ಪಡೆಯಲು ಅರ್ಹರಿರುತ್ತಾರೆ ಎಂದು ಸಚಿವಾಲಯ ತಿಳಿಸಿದೆ.