ಒಮಿಕ್ರಾನ್ ಅಲೆಯಲ್ಲಿ ಕಂಡವರನ್ನೆಲ್ಲ ಹಿಡಿದು ಟೆಸ್ಟ್ ಮಾಡೋ ಹಂಗಿಲ್ಲ- ನಿಮಗೆ ಗೊತ್ತಿರಲಿ, ಐ ಸಿ ಎಂ ಆರ್ ಮಾರ್ಗಸೂಚಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಈ ಹಿಂದೆ ಕೋವಿಡ್‌ ಸೋಂಕಿತರ ಪತ್ತೆಗೆ ದೇಶದಲ್ಲಿ ಟೆಸ್ಟ್, ಟ್ರಾಕ್,‌ ಟ್ರೀಟ್ ಅನ್ನುವ ಕಾರ್ಯತಂತ್ರ ಬಳಕೆಯಲ್ಲಿತ್ತು. ಈ ಬಾರಿ ಒಮಿಕ್ರಾನ್‌ ಸೋಂಕಿತರ ಪತ್ತೆಯಲ್ಲಿ ಈ ಕಾರ್ಯತಂತ್ರ ಸಂಪೂರ್ಣವಾಗಿ ಬದಲಾಗಿದೆ ಅನ್ನುವುದು ಐಸಿಎಂ ಆರ್‌ ನ ಹೊಸ ಮಾರ್ಗಸೂಚಿ ಸೂಚಿಸುತ್ತಿದೆ.

ಕೋವಿಡ್‌ ಮೊದಲೆರಡು ಅಲೆಯಲ್ಲಿ ಆಸ್ಪತ್ರೆಗಳು ಹಾಗೂ ಸರ್ಕಾರಗಳು ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದ ಪ್ರೈಮರಿ ಹಾಗೂ ಸೆಕೆಂಡರಿ ಕಾಂಕ್ಯಾಟ್‌ ಗಳನ್ನು ಮುಲಾಜಿಲ್ಲದೆ ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗುತ್ತಿತ್ತು. ಆದರೆ ಈ ಬಾರಿ ಐಸಿಎಂ ಆರ್‌ ನೀಡಿರುವ ಹೊಸ ಮಾರ್ಗಸೂಚಿಯಲ್ಲಿ ಈ ಅಂಶವನ್ನು ತೆಗೆದು ಹಾಕಿದೆ.

ಹಾಗಿದ್ರೆ ಐಸಿಎಂ ಆರ್‌ ಹೇಳಿದ್ದೇನು?

  • ಕೋವಿಡ್‌ ನ ರೋಗ ಲಕ್ಷಣಗಳು (ಕೆಮ್ಮು, ಜ್ವರ, ಗಂಟಲು ನೋವು, ಉಸಿರಾಟದ ಸಮಸ್ಯೆ) ಇದ್ದವರು ಮಾತ್ರ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಬೇಕು.
  • ಇನ್ನು ಸೋಂಕಿತರ ಸಂಪರ್ಕಕ್ಕೆ ಬಂದ ಹೆಚ್ಚು ತೊಂದರೆಯಾಗಬಲ್ಲ ವ್ಯಕ್ತಿಗಳು, ಅಂದರೆ 60 ವರ್ಷ ಮೇಲ್ಪಟ್ಟವರು, ಮಧುಮೇಹ, ಕಿಡ್ನಿ ಸಮಸ್ಯೆ, ಬೊಜ್ಜಿನ ಸಮಸ್ಯೆ ಇರುವವರು ಮಾತ್ರ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಐಸಿಎಂ ಆರ್‌ ಸ್ಪಷ್ಟಪಡಿಸಿದೆ.
  • ವಿದೇಶಗಳಿಗೆ ಪ್ರಯಾಣ ಮಾಡುವವರು ಆಯಾ ದೇಶಗಳ ಅಗತ್ಯಕ್ಕೆ ತಕ್ಕಂತೆ ಕೊರೋನಾ ಟೆಸ್ಟ್ ಮಾಡಿಸಬೇಕು.
  • ಉಳಿದಂತೆ ವಿದೇಶದಿಂದ ಯಾವುದೇ ಮಾರ್ಗವಾಗಿ ಭಾರತಕ್ಕೆ ಬಂದ ಪ್ರಯಾಣಿಕರಿಗೆ ಕೊರೋನಾ ಪರೀಕ್ಷೆ ಕಡ್ಡಾಯ ಎಂದು ತಿಳಿಸಿದೆ.

ಅಷ್ಟೇ ಅಲ್ಲ ಕೊರೋನಾ ಹೆಸರಿನಲ್ಲಿ ಇತರ ಆರೋಗ್ಯ ಸಂಬಂಧಿ ಕಾಯಿಲೆಗಳ ಚಿಕಿತ್ಸೆಗೆ ಕೋವಿಡ್‌ ಪರೀಕ್ಷೆ ಮಾಡಿಸುವಂತೆ ಆದೇಶಿಸುವ ಆಸ್ಪತ್ರೆಗಳಿಗೆ ಐಸಿಎಂಆರ್‌ ಖಡಕ್‌ ವಾರ್ನಿಂಗ್‌ ಕೊಟ್ಟಿದೆ.

  • ಹೆರಿಗೆ, ಶಸ್ತ್ರಚಿಕಿತ್ಸೆ ಸೇರಿದಂತೆ ಇತರ ಯಾವುದೇ ತುರ್ತು ಚಿಕಿತ್ಸೆಗಳನ್ನು ಕೊರೋನಾ ಪರೀಕ್ಷೆಯ ರಿಪೋರ್ಟ್‌ ಗಾಗಿ ಮುಂದೂಡುವಂತಿಲ್ಲ.
  • ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾಗಿರುವವರಿಗೆ ಕೇವಲ ವಾರಕ್ಕೆ ಒಮ್ಮೆ ಕೊರೋನಾ ಪರೀಕ್ಷೆ ಮಾಡಬೇಕು.
  • ಮುಖ್ಯವಾಗಿ ಸೋಂಕಿನ ಲಕ್ಷಣವಿಲ್ಲದೆ ಶಸ್ತ್ರ ಚಿಕಿತ್ಸೆಗೆ ಅಥವಾ ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ಕೊರೋನಾ ಟೆಸ್ಟ್‌ ಮಾಡಿಸುವಂತಿಲ್ಲ ಎಂದು ಐಸಿಎಂಆರ್‌ ಹೇಳಿದೆ.

ಯಾರೆಲ್ಲಾ ಕೋವಿಡ್‌ ಪರೀಕ್ಷೆ ಮಾಡಿಸಬೇಕಿಲ್ಲ:

  • ವ್ಯಕ್ತಿಗೆ ಯಾವುದೇ ರೀತಿಯ ಕೋವಿಡ್‌ ಸೋಂಕಿನ ಲಕ್ಷಣ ಇಲ್ಲದಿದ್ದರೆ ಪರೀಕ್ಷೆಯ ಅಗತ್ಯವಿಲ್ಲ.
  • ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿದ್ದ 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹಾಗೂ ಯಾವುದೇ ಇತರ ರೋಗಗಳು ಇಲ್ಲದ ವ್ಯಕ್ತಿ ಕೋವಿಡ್‌ ಪರೀಕ್ಷೆಗೆ ಒಳಗಾಗುವ ಅಗತ್ಯವಿಲ್ಲ.
  • ಹೋಂ ಐಸೊಲೇಟ್‌ ಆಗಲು ಸೂಚನೆ ಪಡೆದವರು.
  • ಅಂತರಾಜ್ಯ ಪ್ರಯಾಣಿಕರಿಗೂ ಕೋವಿಡ್‌ ಪರೀಕ್ಷೆ ಕಡ್ಡಾಯವಲ್ಲ ಎಂದು ಐಸಿಎಂಆರ್‌ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!