Thursday, February 29, 2024

ಕೋವಿಡ್, ಪಿಎಸ್‌ಐ ನೇಮಕಾತಿ ಹಗರಣ ಸಿಬಿಐಗೆ ಒಳಪಡಿಸಿ: ಯತ್ನಾಳ್

ಹೊಸದಿಗಂತ ವರದಿ, ವಿಜಯಪುರ:

ಕೋವಿಡ್ ಸಂದರ್ಭದ ಹಾಗೂ ಪಿಎಸ್‌ಐ ನೇಮಕಾತಿ ಹಗರಣಗಳನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಒತ್ತಾಯಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಕಾಲಘಟ್ಟದಲ್ಲಿ ದೊಡ್ಡ ಹಗರಣ ನಡೆದಿದೆ, ಕೋವಿಡ್ ಕಿಡ್‌ಗೆ ಸಂಬಂಧಿಸಿದಂತೆ ಹಿಮಾಚಲ ಪ್ರದೇಶ ಸರ್ಕಾರ ಖರೀದಿಸಿರುವ ಮೊತ್ತಕ್ಕೂ ರಾಜ್ಯ ಸರ್ಕಾರ ಖರೀದಿಸಿರುವ ಮೊತ್ತಕ್ಕೂ ಅಜಗಜಾಂತರ ವ್ಯತ್ಯಾಸವಿದೆ, ಎಲ್ಲವೂ ಬಯಲಿಗೆಳೆಯುವೆ ಎಂದು ಯತ್ನಾಳ ಮತ್ತೊಮ್ಮೆ ಗುಡುಗಿದರು.

ಅಲ್ಲದೆ ಪಿಎಸ್‌ಐ ನೇಮಕಾತಿ ಹಗರಣ ಕೂಡ ಸಿಬಿಐಗೆ ತನಿಖೆಗೆ ಒಳಪಡಿಸಬೇಕು. ಇನ್ನೂ ಕಾಂಗ್ರೆಸ್ ಸರ್ಕಾರ ಕೂಡಲೇ ಈ ಪ್ರಕರಣಗಳನ್ನು ಸಿಬಿಐಗೆ ವಹಿಸಬೇಕು ಎಂದು ಸವಾಲ್ ಹಾಕಿದ ಯತ್ನಾಳ, ಕಾಂಗ್ರೆಸ್‌ನವರು ಇದರಲ್ಲಿ ಶಾಮೀಲಿದ್ದಾರೆ ಎಂದು ಆರೋಪಿಸಿದರು.

ದೆಹಲಿಯಲ್ಲಿ ಬಿಜೆಪಿ ಹೈಕಮಾಂಡ್ ಭೇಟಿ ಫಲಪ್ರದವಾಗಿದ್ದು, ಇಲ್ಲಿನ ಅಡ್ಜೆಸ್ಟ್ ಮೆಂಟ್ ರಾಜಕಾರಣದ ಬಗ್ಗೆ ಸುದೀರ್ಘವಾಗಿ ವರಿಷ್ಠ ನಾಯಕರ ಗಮನಕ್ಕೆ ತಂದಿದ್ದೇನೆ ಎಂದರು.

ಬಿಜೆಪಿ ಹೈಕಮಾಂಡ್ ಆ ನಿರ್ದೇಶನ ನೀಡಿದೆ, ತರಾಟೆಗೆ ತೆಗೆದುಕೊಂಡಿದೆ ಎಂಬುದು ಶುದ್ಧ ಸುಳ್ಳು, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ಇಲ್ಲಿನ ವಿದ್ಯಮಾನ ವಿವರಿಸಿದ್ದೇನೆ, ಸುದೀರ್ಘ 25 ನಿಮಿಷಗಳ ಕಾಲ ಬಿಜೆಪಿಯ ಅಡ್ಜೆಸ್ಟಮೆಂಟ್ ರಾಜಕಾರಣ ಮೊದಲಾದ ಪ್ರಹಸನಗಳನ್ನು ವಿವರಿಸಿದ್ದೇನೆ ಎಂದರು.

ಇನ್ನೂ ನಾನು ಬಿಜೆಪಿಗೆ ಘರ್ ವಾಪಾಸ್ ಆಗಲು ಬಿ.ಎಸ್. ಯಡಿಯೂರಪ್ಪ ಅವರು ಕಾರಣವಲ್ಲ, ವಿಜಯೇಂದ್ರನ ಬೆಂಬಲಿಸುವ ಸಾಮಾಜಿಕ ಜಾಲತಾಣದಲ್ಲಿ ನಾನು ಉಪಕಾರ ಮರೆಯಬಾರದು ಎಂದು ಪ್ರಚಾರ ಮಾಡುತ್ತಿದ್ದಾರೆ, ವಾಸ್ತವವಾಗಿ ಬಿ.ಎಸ್. ಯಡಿಯೂರಪ್ಪ ಅವರು ನಾನು ಬಿಜೆಪಿ ಸೇರ್ಪಡೆಯಾಗುವುದಕ್ಕೆ ಪ್ರಬಲ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಅಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೇ ನನಗೆ ಖುದ್ದು ಪಕ್ಷಕ್ಕೆ ಬರುವಂತೆ ಹೇಳಿದಾಗ ಪಕ್ಷೇತರ ವಿಧಾನ ಪರಿಷತ್ ಸದಸ್ಯನಾಗಿದ್ದ ನಾನು ರಾಜಿನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!