ಅನಧಿಕೃತ ಬಡಾವಣೆಗಳಿಗೆ ಕಡಿವಾಣ: ಬಿ-ಖಾತಾ ನೀಡಲು ಡೆಡ್ ಲೈನ್ ಕೊಟ್ಟ ಸಿಎಂ ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿ-ಖಾತಾ (B Khata) ಅಭಿಯಾನ ರಾಜ್ಯಾದ್ಯಂತ ವಿಸ್ತರಣೆ ಆಗಿದೆ. ಬಿ-ಖಾತಾ ನೀಡಲು, ಪಡೆಯಲು ರಾಜ್ಯ ಸರಕಾರ 3 ತಿಂಗಳು ಡೆಡ್ ಲೈನ್ ಕೊಟ್ಟಿದ್ದು, One Time Solution ಅಡಿ 3 ತಿಂಗಳ ಒಳಗೆ ಬಿ-ಖಾತಾ ಮಾಡಿಸಿಕೊಳ್ಳಬಬಹುದು ಎಂದು ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.

11 ಮಹಾ ನಗರಪಾಲಿಕೆಗಳು ಒಳಗೊಂಡಂತೆ 316 ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬಿ-ಖಾತಾ ನೀಡಲು ಸರ್ಕಾರ ಮುಂದಾಗಿದೆ. ಸ್ವತ್ತಿಗೆ ಹಾಲಿ ಇರುವ ತೆರಿಗೆಗಿಂತ ದುಪ್ಪಟ್ಟು ತೆರಿಗೆ (Tax) ಕೊಟ್ಟು ಬಿ-ಖಾತಾ ಮಾಡಿಸಿಕೊಳ್ಳಬಹುದು. ಸುಮಾರು 40 ಲಕ್ಷ ಆಸ್ತಿಗಳು ಅನಧಿಕೃತವಾಗಿದ್ದು, 4 ಸಾವಿರ ಕೋಟಿ ಆದಾಯ ನಿರೀಕ್ಷೆ ಇದೆ.

ಇಂದು ಇ- ಖಾತೆ ನೀಡುವ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಾಲ್ಕು ಇಲಾಖೆಗಳ ಸಚಿವರ ಜೊತೆ ವೀಡಿಯೋ ಕಾನ್ಫರೆನ್ಸ್ ಸಭೆ ನಡೆಯಿತು. ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಆಯುಕ್ತರು ವೀಡಿಯೋ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದ್ದರು. ಬಿ-ಖಾತಾ ನೀಡುವ ಸಂಬಂಧ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಡೆಡ್‌ಲೈನ್ ಫಿಕ್ಸ್ ಮಾಡಿದ್ದಾರೆ.

ಅನಧಿಕೃತ ಬಡಾವಣೆಗಳು ನಗರ, ಪಟ್ಟಣ, ಪಾಲಿಕೆ ವ್ಯಾಪ್ತಿ ಮತ್ತು ಹಳ್ಳಿಗಳಲ್ಲೂ ಇವೆ. ಇವೆಲ್ಲಕ್ಕೂ ಅಂತ್ಯ ಹಾಡಬೇಕು. ಅನಧಿಕೃತ ಬಡಾವಣೆಗಳಿಂದ ಕಂದಾಯ ಬರುತ್ತಿಲ್ಲ, ಪರಿಣಾಮ‌ ಜನರಿಗೆ ನಾಗರಿಕ ಸವಲತ್ತುಗಳೂ ಸಿಗುತ್ತಿಲ್ಲ. ಸ್ಥಳೀಯ ಸಂಸ್ಥೆಗಳಿಗೆ ಬರುವ ಆದಾಯವೂ ಬಂದ್ ಆಗಿದೆ. ಇವೆಲ್ಲ ಅನಾನುಕೂಲಗಳಿಗೂ ಅಂತ್ಯ ಹಾಡಬೇಕಿದೆ ಎಂದು ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಂದಾಯ ಕಟ್ಟದಿರುವುದರಿಂದ ಇಷ್ಟೆಲ್ಲಾ ಸಮಸ್ಯೆಗಳಾಗಿವೆ. ಇದೊಂದು ಸಲ ಮಾತ್ರ ಬಿ ಖಾತಾ ಕೊಟ್ಟು, ನಂತರ ಅಂತ್ಯ ಹಾಡಬೇಕು. ನಿಮಗೆ (ಅಧಿಕಾರಿಗಳು) ಮೂರು ತಿಂಗಳು ಮಾತ್ರ ಸಮಯ ನೀಡುತ್ತೇನೆ, ಅಷ್ಟರೊಳಗೆ ಅಭಿಯಾನ ನಡೆಸಿ ಪೂರ್ಣಗೊಳಿಸಿ. ಯಾವುದೇ ರಾಜಿ ಇಲ್ಲ. ಅಧಿಕಾರಿಗಳು ರಾಜಿ ಮಾಡಿಕೊಂಡರೆ ಸಹಿಸಲ್ಲ ಎಂದರು.

ಅನಧಿಕೃತ ಬಡಾವಣೆಗಳು ಮತ್ತೆ ತಲೆ ಎತ್ತಿದರೇ ಜಿಲ್ಲಾಧಿಕಾರಿ, ಮುಖ್ಯ ಅಧಿಕಾರಿ, ನಗರ ಯೋಜನಾ ಅಧಿಕಾರಿಗಳು ಜವಾಬ್ದಾರಾಗುತ್ತಾರೆ. ಆಗ, ನಿಮ್ಮ ಮೇಲೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುತ್ತೇವೆ. ಮಧ್ಯವರ್ತಿಗಳಿಗೆ, ಬ್ರೋಕರ್​ಗಳಿಗೆ ತಕ್ಷಣ ಗೇಟ್ ಪಾಸ್ ನೀಡಿ. ಇದನ್ನು ನೀವೆಲ್ಲರೂ ಸ್ಪಷ್ಟವಾಗಿ, ಖಚಿತವಾಗಿ ಅರ್ಥ ಮಾಡಿಕೊಳ್ಳಿ. ರಾಜ್ಯದಲ್ಲಿ ಇನ್ನೆಲ್ಲೂ ಅನಧಿಕೃತ ಬಡಾವಣೆಗಳು, ರೆವಿನ್ಯೂ ಬಡಾವಣೆಗಳು ತಲೆ ಎತ್ತಬಾರದು ಎಂದು ಎಚ್ಚರಿಕೆ ನೀಡಿದರು.

ಅನಧಿಕೃತ, ರೆವಿನ್ಯೂ ಬಡಾವಣೆಗಳಲ್ಲಿ ನಿವೇಶನ, ಮನೆ ಕಟ್ಟಿರುವವರಿಗೆ ತೊಂದರೆ ಆಗಬಾರದು. ಒಟ್ಟಾರೆಯಾಗಿ ಬಡವರು, ಮಧ್ಯಮ ವರ್ಗದವರಿಗೆ ಅನುಕೂಲ ಮಾಡಿಕೊಡಲು ಒಂದು ಬಾರಿ ಪರಿಹಾರ ಕೊಟ್ಟಿದ್ದೀವೆ. ಮೂರು ತಿಂಗಳಲ್ಲಿ ಎಲ್ಲರಿಗೂ ಖಾತಾ ನೀಡಿ ಅಂತ್ಯ ಹಾಡಿ. ನಾನು ಮತ್ತು ಸಂಬಂಧಪಟ್ಟ ಎಲ್ಲಾ ಸಚಿವರು ಸ್ಪಷ್ಟಪಡಿಸಿದ್ದೀವೆ. ಹೊಸ ಗೊಂದಲಗಳಿಗೆ ಅವಕಾಶ ಮಾಡಿಕೊಡಬೇಡಿ ಬಿ ಖಾತಾ ಇವತ್ತಿನಿಂದಲೇ ಕೊಡಲು ಶುರು ಮಾಡಿ ಎಂದು ಸೂಚನೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!