ಹೊಸದಿಗಂತ ಡಿಜಿಟಲ್ ಡೆಸ್ಕ್ :
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕನ್ನಡ ಕಾನೂನು ನಿಘಂಟು ರಚನೆಗೆ ಕನ್ನಡ ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ನ್ಯಾಯಾಂಗ ಕ್ಷೇತ್ರದಲ್ಲಿ ಕನ್ನಡ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕನ್ನಡದಲ್ಲಿ ತೀರ್ಪು ಕೊಡುವುದು ಅಷ್ಟು ಸುಲಭವಲ್ಲ, ಕನ್ನಡದಲ್ಲಿ ತೀರ್ಪು ನೀಡಿ ನೀವೆಲ್ಲ ಸಾಧನೆ ಮಾಡಿದ್ದೀರಿ. ಆಧೀನ ನ್ಯಾಯಾಲಯದಲ್ಲಿ ಕನ್ನಡದಲ್ಲಿ ತೀರ್ಪು ನೀಡಲಾಗುತ್ತಿದೆ. ಹೈಕೋರ್ಟ್ ನಲ್ಲೂ ಕನ್ನಡದಲ್ಲಿ ತೀರ್ಪು ನೀಡಬೇಕಿದೆ. ಹೈಕೋರ್ಟ್ ನಲ್ಲಿ ಕನ್ನಡದಲ್ಲಿ ತೀರ್ಪು ನೀಡುವುದು ಕಷ್ಟ. ಆದರೆ, ಸಾಧ್ಯವಿದೆ. ಹೀಗಾಗಿ ಕನ್ನಡದ ಕಾನೂನು ನಿಘಂಟು ರಚನೆಯಾಗಬೇಕು. ತಜ್ಞರ ತಂಡದಿಂದ ಕನ್ನಡ ಕಾನೂನು ನಿಘಂಟು ರಚಿಸಬೇಕು. ಈ ನಿಟ್ಟಿನಲ್ಲಿ ಅಗತ್ಯಕ್ರಮ ಕೈಗೊಳ್ಳಬೇಕೆಂದು ಸಿಎಂ ಹೇಳಿದ್ದಾರೆ.
ಆಡಳಿತದಲ್ಲಿ ಕನ್ನಡ ಇರಬೇಕು ಎಂಬುದಕ್ಕೆ ದೊಡ್ಡ ಚಳವಳಿ ನಡೆದಿದೆ. ಶಿಕ್ಷಣದಲ್ಲಿ ಕನ್ನಡದ ಬಗ್ಗೆ ಅನೇಕ ಕಾನೂನು ಸುತ್ತೋಲೆ ಹೊರಡಿಸಿದ್ದೇವೆ. ಶಿಕ್ಷಣ ಆಯ್ಕೆಯಲ್ಲಿ ಐಚ್ಚಿಕ ವಿಷಯದಲ್ಲಿ ಸ್ವಾತಂತ್ರ್ಯವಿರಬೇಕೆಂಬ ಆದೇಶವಿದೆ. ಸುಪ್ರೀಂಕೋರ್ಟ್ ಆದೇಶದಿಂದ ಕೆಲವು ನಿಯಮ ಜಾರಿ ಸಾಧ್ಯವಾಗಿಲ್ಲ. ಕನ್ನಡ ನಾಡಿನಲ್ಲಿ ಕನ್ನಡ ಭಾಷೆ ಕಾನೂನಾತ್ಮಕ ಜಾರಿಗೆ ರಾಜ್ಯ ಸರ್ಕಾರ ಸಕಲ ಪ್ರಯತ್ನ ಮಾಡುತ್ತಿದೆ ಎಂದರು.