ಹೊಸದಿಗಂತ ವರದಿ, ವಿಜಯಪುರ:
ಕರ್ನಾಟಕದಲ್ಲಿ ಒಂದು ರೀತಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ, ಓಟ್ ಬ್ಯಾಂಕ್ ರಾಜಕಾರಣ ಅವ್ಯಾಹತವಾಗಿ ನಡೆಯುತ್ತಿದೆ, ರಾಜ್ಯದಲ್ಲಿ ಕೆಲ ರಾಜಕಾರಣಿಗಳು ರಾಜಕಾರಣಕ್ಕಾಗಿ ಯಾವ ಮಟ್ಟಕ್ಕಾದರೂ ಹೋಗುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅಸಮಾಧಾನ ವ್ಯಕ್ತಪಡಿಸಿದರು.
ನಗರ ಹೊರ ಭಾಗದ ಸುಕ್ಷೇತ್ರ ತೊರವಿಯ ಲಕ್ಷ್ಮೀ ನರಸಿಂಹ ದೇವಸ್ಥಾನದ ವಾರ್ಷಿಕೋತ್ಸವ ಕಾರ್ಯಕ್ರಮ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸಲ್ಮಾನರಿಗೆ ತೊಂದರೆಯಾಗುತ್ತಿದೆ, ಅದಕ್ಕಾಗಿ ಅವರು ಪಾಕ್ ಜಿಂದಾಬಾದ್ ಎನ್ನುತ್ತಿದ್ದಾರೆ ಎಂದು ಒಬ್ಬ ರಾಜಕಾರಣಿ ಹೇಳಿದ್ದಾರೆ, ಇದು ಯಾವ ಮಟ್ಟಕ್ಕೆ ಇಂದಿನ ರಾಜಕಾರಣ ತಲುಪಿದೆ ಎಂದು ಪ್ರಶ್ನಿಸಿದರು.
ಈ ಕುರಿತು ಕಾಂಗ್ರೆಸ್ ಪಕ್ಷದವರ ನಡೆಗೆ ವ್ಯಾಪಕ ವಿರೋಧ ವ್ಯಕ್ತವಾಗಿ ಜನರು ಬಾಯಿಗೆ ಬಂದ ಹಾಗೆ ಬೈಯುತ್ತಿರುವ ಕಾರಣ ಕಾಂಗ್ರೆಸ್ಸಿಗರು ಪಾಕಿಸ್ತಾನ ಮೇಲೆ ಅಟ್ಯಾಕ್ ಮಾಡಬೇಕು ಎಂದು ಹೊಸ ಮಾತು ಹೇಳಲು ಆರಂಭಿಸಿದ್ದಾರೆ, ದೆಹಲಿಯಲ್ಲಿ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಬದ್ಧ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಾರೆ, ಆದರೆ ಕರ್ನಾಟಕಕ್ಕೆ ಬಂದು ಗುಪ್ತಚರ ವೈಫಲ್ಯ ಎಂದು ಹೇಳುತ್ತಾರೆ ಎಂದರು.