ಹೊಸದಿಗಂತ ವರದಿ, ಶಿವಮೊಗ್ಗ:
ಆನ್‌ಲೈನ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಕಿಂಗ್‌ಪಿನ್ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಬಂತನನ್ನು ನಗರದ ಹೊಸಮನೆ ನಿವಾಸಿ ಸತೀಶ್(28) ಎಂದು ಗುರುತಿಸಲಾಗಿದೆ. ಈತನಿಂದ 25 ಲಕ್ಷ ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಜಿ.ಕೆ.ಮಿಥುನ್‌ಕುಮಾರ್ ಮಂಗಳವಾರ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಉಪವಿಭಾಗದ ಡಿವೈಎಸ್‌ಪಿ ಬಾಲರಾಜ್ ಹಾಗೂ ಸಿಇಎನ್ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸಂತೋಷ್ ಪಾಟೀಲ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು ಎಂದು ತಿಳಿಸಿದರು.
ವಿಶೇಷ ತಂಡ ಕಾರ್ಯಾಚರಣೆ ನಡೆಸಿ ನಗರದಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದವರ ಮೇಲೆ ದಾಳಿ ನಡೆಸಿದೆ. ಈ ವೇಳೆ ಸತೀಶ್ ಹಾಗೂ ಇತರೆ ಮೂವರು ಆರೋಪಿಗಳಿಂದ 7.20 ಲಕ್ಷ ರೂ. ನಗದು, 03 ಮೊಬೈಲ್ ಫೋನ್ ಹಾಗೂ 1 ಬೈಕ್ ವಶಕ್ಕೆ ಪಡೆಯಲಾಗಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿ ಕಾರ್ತಿಕ್ ಎಂಬುವರು ತಮ್ಮ ಸ್ನೇಹಿತ ಸತೀಶ್, ಕಳೆದ ಮೂರ್ನಾಲ್ಕು ವರ್ಷಗಳಿಂದ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಹಣ ಹೂಡಿದರೆ ಹೆಚ್ಚಿನ ಹಣ ಗಳಿಸಿ ಕೊಡುತ್ತೇನೆ ಎಂದು ಹೇಳಿ ಸುಮಾರು 3 ಲಕ್ಷ ರೂ.ಗಳನ್ನು ಹಿಂದಿರುಗಿಸದೇ ಮೋಸ ಮಾಡಿದ್ದಾನೆ ಎಂದು ದೂರು ನೀಡಿದ್ದರು. ಇದರ ಆಧಾರದ ಮೇಲೆ ದಾಳಿ ಮಾಡಿದಾಗ, ಒಟ್ಟು 25.46 ಲಕ್ಷ ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ. 05 ಮೊಬೈಲ್ ಫೋನ್ ಹಾಗೂ 1 ಬೈಕ್ ವಶಕ್ಕೆ ಪಡೆಯಲಾಗಿದೆ ಎಂದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್‌ಕುಮಾರ್ ಭೂಮರೆಡ್ಡಿ, ಡಿವೈಎಸ್‌ಪಿ ಬಾಲರಾಜ್, ಇನ್ಸ್‌ಪೆಕ್ಟರ್ ಸಂತೋಷ್ ಪಾಟೀಲ್ ಸುದ್ದಿಗೋಷ್ಟಿಯಲ್ಲಿದ್ದರು.